ದಾವಣಗೆರೆ: ಸ್ಥಳೀಯವಾಗಿ ಇದ್ದುಕೊಂಡು ಮತದಾನ ಮಾಡುವುದೇ ಕಷ್ಟವಿರುವಾಗ ವಿದೇಶದಿಂದ ಟೆಕ್ಕಿಯೊಬ್ಬರು ಜಿಲ್ಲೆಯ ಕಕ್ಕರಗೊಳ್ಳ ಗ್ರಾಮಕ್ಕೆ ಆಗಮಿಸಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ವಿಜಯ್ ಕುಮಾರ್ ಮತದಾನ ಮಾಡಲು ಬಂದ ಟೆಕ್ಕಿ. ಇವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಿಂದ ಸ್ವಗ್ರಾಮಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ರಾಜ್ಯದ ಜನತೆ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ನಾವೇ ವಿದೇಶದಿಂದ ಆಗಮಿಸಿ ಮತದಾನ ಮಾಡಿ ನಂತರ ಹೋಗುತ್ತಿದ್ದೇವೆ. ಇಲ್ಲೇ ಸ್ಥಳೀಯವಾಗಿ ಇದ್ದುಕೊಂಡು ಮತದಾನ ಮಾಡದೇ ಇರುವುದು ಸರಿಯಲ್ಲ. ಮತದಾನ ನಮ್ಮ ಹಕ್ಕು. ಅದನ್ನು ಯಾರು ಕೂಡ ಕಳೆದುಕೊಳ್ಳಬಾರದು ಎಂದು ಮತದಾರರಲ್ಲಿ ವಿಜಯ್ ಕುಮಾರ್ ಮನವಿ ಮಾಡಿಕೊಂಡರು.