ವಾಷಿಂಗ್ಟನ್: ಅಮೆರಿಕದಲ್ಲಿ ಮೈಸೂರು ಯುವಕನಿಗೆ ಗುಂಡಿಕ್ಕಿ ಕೊಂದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೈಸೂರು ಮೂಲದ ಅಭಿಷೇಕ್ ಸುದೇಶ್ ಭಟ್ (25)ನನ್ನು ಸ್ಯಾನ್‍ಬರ್ನಾಡಿಯೊನದ ಹೋಟೆಲ್ ಒಂದರಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈಗ ಈ ಪ್ರಕರಣದ ಆರೋಪಿಯಾದ ಎರಿಕ್ ಟರ್ನರ್ (42) ಪೋಲಿಸರಿಗೆ ಶರಣಾಗಿದ್ದಾನೆ ಎಂದು ಸ್ಯಾನ್‍ಬರ್ನಾಡಿಯೊ ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಅಮೆರಿಕದಲ್ಲಿ ವಾಸವಿದ್ದ ಅಭಿಷೇಕ್ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಂ.ಎಸ್ ಮಾಡುತ್ತಿದ್ದರು. ಇದರ ಜೊತೆಗೆ ಸ್ಯಾನ್‍ಬರ್ನಾಡಿಯೊನ ಪ್ರದೇಶದ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಹೋಟೆಲ್‍ನ ಕೆಲಸಗಾರರು ಗುರುವಾರ ರೂಂ ಸ್ವಚ್ಛಗೊಳಿಸುತ್ತಿದ್ದರು. ಆದರೆ ಒಂದು ರೂಂನಲ್ಲಿದ್ದ ವ್ಯಕ್ತಿಯೊಬ್ಬ ಮಾತ್ರ ಬಾಗಿಲು ತೆಗೆದಿರಲಿಲ್ಲ.
ಈ ವಿಚಾರವನ್ನು ಕೆಲಸಗಾರರು ಅಭಿಷೇಕ್‍ಗೆ ತಿಳಿಸಿದ್ದರು. ಆಗ ಅಭಿಷೇಕ್ ವ್ಯಕ್ತಿ ಇದ್ದ ರೂಂ ಬಾಗಿಲನ್ನು ತಟ್ಟಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿ ಏಕಾ ಏಕಿ ಅಭಿಷೇಕ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಭಿಷೇಕ್ ಸ್ನೇಹಿತರು, ದೂರವಾಣಿ ಮೂಲಕ ಅಭಿಷೇಕ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.
ಘಟನೆ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕ್ಯಾಮೆರಾ ಫೂಟೇಜ್‍ಗಳನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅಭಿಷೇಕ್ ಪೋಷಕರು ತಿಳಿಸಿದ್ದರು.