ವಾಷಿಂಗ್ಟನ್: ಅಮೆರಿಕದಲ್ಲಿ ಅಪರಿಚಿತ ಗುಂಡಿನ ದಾಳಿಗೆ ಮೈಸೂರು ಮೂಲದ ಯುವಕನೋರ್ವ ಮೃತಪಟ್ಟಿದ್ದಾರೆ.
ಮೃತ ಯುವಕನನ್ನು ಸಾಹಿತಿ ಕೆ.ಶಿವರಾಮ ಐತಾಳ್ ಅವರ ಮೊಮ್ಮಗ ಹಾಗೂ ಮೈಸೂರಿನ ಕುವೆಂಪುನಗರದ ನಿವಾಸಿ ಸುದೇಶ್ ಚಂದ್ ಅವರ ಮಗ ಅಭಿಷೇಕ್ ಸುದೇಶ್ ಭಟ್ (25) ಎಂದು ಗುರುತಿಸಲಾಗಿದೆ. ಅಮೆರಿಕದ ಸ್ಯಾನ್‍ಬರ್ನಾಡಿಯೊ ಎಂಬ ಪ್ರದೇಶದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟಿದ್ದಾರೆ.
ಅಮೆರಿಕದಲ್ಲಿ ಎಂ.ಎಸ್ ಓದುತ್ತಿದ್ದ ಅಭಿಷೇಕ್ ಕಳೆದ ಒಂದೂವರೆ ವರ್ಷದಿಂದ ಅಮೆರಿಕದಲ್ಲಿ ವಾಸವಿದ್ದರು. ವಿದ್ಯಾಭ್ಯಾಸ ಜೊತೆಗೆ ಹೋಟೆಲ್‍ವೊಂದರಲ್ಲಿ ರಿಸಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಭಿಷೇಕ್ ಮೇಲೆ ಗುರುವಾರ ಮಧ್ಯರಾತ್ರಿ 11.30ರ ವೇಳೆಗೆ ಕೆಲಸ ಮುಗಿಸಿ ಹೋಟೆಲ್ ನಿಂದ ಹೊರಬರುವಾಗ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ಮಾಡಿದ್ದಾರೆ. ಪರಿಣಾಮ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಭಿಷೇಕ್ ಎರಡು ದಿನಗಳ ಹಿಂದೆ ಅವರ ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದು, ಘಟನೆ ನಡೆಯುವ 15 ನಿಮಿಷಕ್ಕೂ ಮುಂಚೆ ಮನೆಗೆ ಸಂದೇಶ ಕೂಡ ಕಳುಹಿಸಿದ್ದಾರೆ. ಇದಾದ 15 ನಿಮಿಷಕ್ಕೆ ಅವರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಥ್ಯಾಂಕ್ಸ್ ಗೀವಿಂಗ್ ಡೇ ಆಚರಣೆ ಹಾಗೂ ಸ್ಯಾನ್‍ಬರ್ನಾಡಿಯೊದಲ್ಲಿನ ಭಾರೀ ಹಿಮಪಾತದಿಂದ ಮೃತದೇಹ ತರಲು ತೊಂದರೆಯಾಗಿದೆ. ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ವಿದೇಶಾಂಗ ಇಲಾಖೆ ಜೊತೆ ಮಾತನಾಡಿದ್ದಾರೆ.