– ಅಮೆರಿಕ ವೀಸಾಗಾಗಿ ಕನ್ನಡಿಗರು ಇನ್ನು ಚೆನ್ನೈಗೆ ಹೋಗಬೇಕಾಗಿಲ್ಲ
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಮೆರಿಕ (America) ಭೇಟಿಯಿಂದ ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರು (Bengaluru) ಹಾಗೂ ಅಹಮದಾಬಾದ್‌ನಲ್ಲಿ (Ahmedabad) ತನ್ನ ರಾಯಭಾರ ಕಚೇರಿ (Consulate) ತೆರೆಯಲು ಅಮೆರಿಕ ನಿರ್ಧರಿಸಿದೆ.
ಅಮೆರಿಕವು ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲೂ 2 ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಉದ್ದೇಶಿಸಿದ್ದು, ಈ ಮೂಲಕ ಭಾರತದ ಜನರೊಂದಿಗಿನ ಸಂಬಂಧವನ್ನು ಹೆಚ್ಚಿಸಲು ಮುಂದಾಗಿರುವುದಾಗಿ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಕಳೆದ ವರ್ಷ ಅಮೆರಿಕ ಭಾರತೀಯ ವಿದ್ಯಾರ್ಥಿಗಳಿಗೆ ಸುಮಾರು 1,25,000 ದಾಖಲೆಯ ವೀಸಾಗಳನ್ನು ನೀಡಿದೆ. ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20% ರಷ್ಟು ಹೆಚ್ಚಳವಾಗಿದ್ದು, ಅಮೆರಿಕದಲ್ಲೇ ಅತಿ ದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?
ಅಮೆರಿಕದ ವಾಷಿಂಗ್ಟನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ಹೂಸ್ಟನ್ ಹಾಗೂ ಅಟ್ಲಾಂಟಾದಲ್ಲಿ ಭಾರತ ತನ್ನ ಒಟ್ಟು 5 ರಾಯಭಾರ ಕಚೇರಿಗಳನ್ನು ಹೊಂದಿದೆ. ಭಾರತದಲ್ಲಿ ಪ್ರಸ್ತುತ ನವದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹಾಗೂ ಹೈದರಾಬಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿಗಳಿವೆ.
ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ವಿಶ್ವದ ಅತಿದೊಡ್ಡ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ಕರ್ನಾಟಕದ ಜನತೆ ಅಮೆರಿಕ ಪ್ರವಾಸ ಕೈಗೊಳ್ಳಲು ವೀಸಾ ಪಡೆಯಲು ಚೆನ್ನೈ ಅಥವಾ ಹೈದರಾಬಾದ್ ಅಲೆಯುವುದು ಅನಿವಾರ್ಯವಾಗಿತ್ತು. ಇದೀಗ ಬೆಂಗಳೂರಿನಲ್ಲೂ ಅಮೆರಿಕದ ರಾಯಭಾರ ಕಚೇರಿ ತೆರೆದರೆ ಪ್ರಯಾಣಿಕರು ಇತರ ರಾಜ್ಯಗಳಿಗೆ ಹೋಗುವ ಅನಿವಾರ್ಯತೆ ಇರುವುದಿಲ್ಲ. ಇದನ್ನೂ ಓದಿ: ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್