ವಾಷಿಂಗ್ಟನ್: ಡೆಡ್ಲಿ ಕೊರೊನಾ ವೈರಸ್‍ಗೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಪೈಕಿ 11 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 16 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಎಲ್ಲಾ ಭಾರತೀಯ ನಾಗರಿಕರು ಪುರುಷರು ಎಂದು ವರದಿಯಾಗಿದೆ. ಸಾವನ್ನಪ್ಪಿದ 11 ಮಂದಿಯಲ್ಲಿ ಹತ್ತು ಮಂದಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶದವರಾಗಿದ್ದು, ಮೊತ್ತೊಬ್ಬರು ಫ್ಲೋರಿಡಾ ನಗರದಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ನಾಲ್ವರು ನ್ಯೂಯಾರ್ಕ್ ನಗರದಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಹೆಚ್ಚು ಭಾರತೀಯರು ವಾಸಿಸುವ ನ್ಯೂಯಾರ್ಕ್ ನಗರವು ಅಮೆರಿಕದಲ್ಲಿ ಕೊರೊನಾ ವೈರಸ್ ನ ಹಾಟ್‍ಸ್ಪಾಟ್ ಆಗಿದೆ. ಈ ಪ್ರದೇಶದಲ್ಲಿ ಕೊರೊನಾದಿಂದ 6,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1,38,000ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. ಇದಾದ ನಂತರ ನ್ಯೂಜೆರ್ಸಿಯಲ್ಲಿ ಸೋಂಕಿನಿಂದ 1,500 ಜನರು ಸಾವನ್ನಪ್ಪಿದ್ದು, ಸುಮಾರು 48,000 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಭಾರತೀಯರು ಇದ್ದಾರೆ.
ಕೊರೊನಾ ವೈರಸ್ ಪರೀಕ್ಷೆಯಲ್ಲಿ ನಾಲ್ಕು ಮಹಿಳೆಯರು ಸೇರಿದಂತೆ 16 ಭಾರತೀಯರಿಗೆ ಸೋಂಕು ಪಾಸಿಟಿವ್ ಬಂದಿದ್ದು, ಅವರನ್ನು ಸ್ವಯಂ ನಿರ್ಬಂಧದಲ್ಲಿ ಇರಿಸಲಾಗಿದೆ. ಅಮೆರಿಕಾದ ಬೇರೆ ಬೇರೆ ಪ್ರದೇಶದಲ್ಲಿ ಅಂದರೆ ನ್ಯೂಯಾರ್ಕ್‍ನಲ್ಲಿರುವ ಎಂಟು ಮಂದಿಗೆ ನ್ಯೂಜೆರ್ಸಿಯಲ್ಲಿ ಮೂವರಿಗೆ ಮತ್ತು ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.
ಅಮೆರಿಕದಲ್ಲಿ ಬಹಳಷ್ಟು ಮಂದಿ ಭಾರತೀಯರು ಇದ್ದಾರೆ. ಉದ್ಯೋಗ, ವ್ಯಾಪಾರ ಮತ್ತು ಕಾರು ಚಾಲಕ ವೃತ್ತಿಗೆ ತೆರಳಿ ಅಲ್ಲೇ ನೆಲಸಿದ್ದಾರೆ. ಸದ್ಯ ಅಮೆರಿಕದಲ್ಲಿ ಕೊರೊನಾ ವೈರಸ್ ತಂಡವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಸದ್ಯ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿರುವವರು ಭಾರತದ ಉತ್ತರಾಖಂಡ, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದ ಮೂಲದವರು ಎಂದು ತಿಳಿದು ಬಂದಿದೆ.
ಅಮೆರಿಕದಲ್ಲಿ ಕೊರೊನಾ ವೈರಸ್ ಪೀಡಿತ ಭಾರತೀಯರಿಗೆ ಅಗತ್ಯ ನೆರವು ನೀಡಲು ಭಾರತೀಯ ರಾಯಭಾರ ಕಚೇರಿ ಸತತ ಕೆಲಸ ಮಾಡುತ್ತಿದೆ. ಸ್ಥಳೀಯ ಅಮೆರಿಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವ ಭಾರತೀಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಭಾರತೀಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.