‘4 ವಾರ ಕೆಲಸ ನಿರ್ವಹಿಸಿ ಮನೆಗೆ ಬಂದಿದ್ದ ನನಗೆ ಶಾಕ್ ಕಾದಿತ್ತು’

Public TV
2 Min Read
Uma Madhusudana

– ವಿಶೇಷ ಗೌರವದ ಕ್ಷಣವನ್ನು ನೆನೆದ ಡಾ.ಉಮಾ ಮಧುಸೂದನ್

ಬೆಂಗಳೂರು: ನಾಲ್ಕು ವಾರಗಳ ಕಾಲ ಕೆಲಸ ನಿರ್ವಹಿಸಿ ಮನೆಗೆ ಬಂದಿದ್ದ ನನಗೆ ಶಾಕ್ ಕಾದಿತ್ತು ಎಂದು ಅಮೆರಿಕದಲ್ಲಿರುವ ಮೈಸೂರು ಮೂಲದ ಡಾ.ಉಮಾ ಮಧುಸೂದನ್ ಹೇಳಿದ್ದಾರೆ.

ಡಾ.ಉಮಾ ಮಧುಸೂದನ್ ಅವರು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ ಅಮೆರಿಕದಲ್ಲಿ ತಮಗೆ ಸಿಕ್ಕ ಗೌರವದ ಕ್ಷಣವನ್ನು ವಿವರಿಸಿದ್ದಾರೆ. ”ನಾನು ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದು. ಮೈಸೂರಿನ ಸೆಂಟ್ ಜೋಸೆಫ್ ಸ್ಕೂಲ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ನಂತರ 1997ರಲ್ಲಿ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡೆ. ಅಲ್ಲಿ ವ್ಯಾಸಂಗ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ” ಎಂದು ತಿಳಿಸಿದರು. ಇದನ್ನೂ ಓದಿ: ಅಮೆರಿಕದಲ್ಲಿ ಮೈಸೂರಿನ ವೈದ್ಯೆಗೆ ವಿಶೇಷ ಗೌರವ

Uma Madhusudan 2

”ಮದುವೆಯಾದ ಬಳಿಕ ಮಲೇಷ್ಯಾಗೆ ಹೋಗಿ ನಾಲ್ಕು ವರ್ಷ ವೈದ್ಯಕೀಯ ಸೇವೆ ಸಲ್ಲಿಸಿದೆ. ಅಲ್ಲಿಂದ ಕುಟುಂಬ ಸಮೇತ ಅಮೆರಿಕಗೆ ಬಂದಿದ್ದೇವೆ. ಸದ್ಯ ನ್ಯೂಯಾರ್ಕ್ ಸಮೀಪದ ಕನೆಕ್ಟಿಕೆಟ್‍ನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತೇವೆ” ಎಂದು ಹೇಳಿದರು.

”ಕೊರೊನಾ ವೈರಸ್ ಹರಡುವುದನ್ನು ತಡೆಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದೆವು. ಯಾರು ರೋಗಿಗಳನ್ನು ನೋಡಿಕೊಳ್ಳುತ್ತಾರೆ ಎನ್ನುವ ವಿಚಾರ ಬಂದಾಗ ಆಸ್ಪತ್ರೆಯು ನನ್ನನ್ನೂ ಕೂಡ ಆಯ್ಕೆ ಮಾಡಿತ್ತು. ಕಳೆದ ನಾಲ್ಕು ವಾರಗಳಿಂದ ದಿನದ 12 ಗಂಟೆಗಳ ರೋಗಿಗಳನ್ನು ನೋಡಿಕೊಳ್ಳುತ್ತಿದ್ದೆ. ಹೀಗಾಗಿ ಮಾನಸಿಕ ಹಾಗೂ ದೈಹಿಕವಾಗಿ ಸ್ವಲ್ಪ ಒತ್ತಡದ ಅನುಭವಾಗುತ್ತಿತ್ತು” ಎಂದರು. ಇದನ್ನೂ ಓದಿ: ಅಮೆರಿಕದಲ್ಲಿ ಮೈಸೂರಿನ ವೈದ್ಯೆಗೆ ವಿಶೇಷ ಗೌರವ- ಸಿಎಂ ಅಭಿನಂದನೆ

Uma Madhusudan 1

”ಆಸ್ಪತ್ರೆಯಲ್ಲಿ ನಾಲ್ಕು ವಾರಗಳ ಕಾಲ ಕೆಲಸ ನಿರ್ವಹಿಸಿ ಮನೆಗೆ ಬಂದಿದ್ದೆ. ತುಂಬಾ ದಣಿವಾಗಿದ್ದರಿಂದ ರೆಸ್ಟ್ ಮಾಡಲು ಬಯಸಿದ್ದೆ. ಹೀಗಾಗಿ ರಜೆ ಕೋರಿ ನಮ್ಮ ಮೇಲ್ವಿಚಾರಕರಿಗೆ ಮೆಸೇಜ್ ಮಾಡಿದ್ದೆ. ಆದರೆ ಅಂದು ನನಗೆ ಶಾಕ್ ಕಾದಿತ್ತು. ನಾವು ಹೊರಗೆ ಹೋಗಿ ಚಪ್ಪಾಳೆ ತಟ್ಟಬೇಕು. ಈ ಮೂಲಕ ಕೊರೊನಾ ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸಬೇಕು ಎಂದು ಪತಿ ಹಾಗೂ ಮಕ್ಕಳು ಹೇಳಿದರು. ಹೀಗಾಗಿ ಹೊರಗೆ ಬಂದು ನೋಡಿದಾಗ ಸಾಲು ಸಾಲಾಗಿ ನೂರಾರು ಜನರು ಕಾರುಗಳು, ಪೊಲೀಸರು, ಅಗ್ನಿಶಾಮಕ ದಳವು ಮನೆಯ ಮುಂದೆ ಬಂದು ಗೌರವ ಸಲ್ಲಿಸಿದರು. ಇದನ್ನು ಕಂಡು ನಾನು ಭಾವುಕಳಾಗಿದ್ದೆ” ಎಂದು ನೆನೆದರು.

”ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್‍ಗೆ ಜನರು ಹೀಗೆ ಗೌರವ ತೋರಿಸುತ್ತಿದ್ದಾರೆ. ನನಗೂ ಇಂತಹ ಗೌರವ ಸಿಕ್ಕಿದ್ದನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಆದರೆ ನನಗೆ ಗೌರವ ಸಲ್ಲಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಅಚ್ಚರಿ ತಂದಿದೆ. ಈ ವಿಡಿಯೋ ಕೊರೊನಾ ವಾರಿಯರ್ಸ್ ಗಳಿಗೆ ಉತ್ಸಾಹ, ಪ್ರೋತ್ಸಾಹ, ಗೌರವ ಸೂಚಿಸಲು ವೈರಲ್ ಮಾಡಿದ್ದಾರೆ ಎಂಬ ಅಭಿಪ್ರಾಯ ನನ್ನಲ್ಲಿದೆ” ಎಂದು ತಿಳಿಸಿದರು.

”ಕೊರೊನಾ ಸೋಂಕಿತರ ವಾರ್ಡ್ ಗಳಲ್ಲಿ ಕೆಲ ಮಾಡುವುದು ಒಂದು ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ. ಶನಿವಾರ ಬೆಳಗ್ಗೆ ನನಗೆ ರಜೆ ಬೇಕು ಅಂದುಕೊಂಡಿದ್ದೆ. ಆದರೆ ಅಂದು ನನಗೆ ಸಿಕ್ಕ ಗೌರವದಿಂದಾಗಿ ನನ್ನಲ್ಲಿದ್ದ ದಣಿವು, ಬೇಜಾರು ಮಾಯವಾಯಿತು. ಕೊರೊನಾ ವಿರುದ್ಧದ ಹೋರಾಟ ಒಂದು ಯುದ್ಧ ಇದ್ದಂತೆ. ಹೀಗಾಗಿ ಕೊರೊನಾ ವಾರಿಯರ್ಸ್ ವಿರುದ್ಧ ಹೋರಾಟುತ್ತಿರುವ ಪ್ರತಿಯೊಬ್ಬರಿಗೂ ಗೌರವ ಸೂಚಿಸಿ, ಪ್ರೋತ್ಸಾಹಿಸಬೇಕು” ಎಂದು ಕರೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *