ನರಹಂತಕನನ್ನು ಹಿಡಿದ ಶ್ವಾನದ ಫೋಟೋ ಟ್ವೀಟ್ ಮಾಡಿದ ಟ್ರಂಪ್

Public TV
2 Min Read
collage dog

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಹಿಡಿಯಲು ಸಹಾಯ ಮಾಡಿದ ಅಮೆರಿಕ ಸೇನಾ ಶ್ವಾನದ ಫೋಟೋವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಐಸಿಸ್ ನಾಯಕ ಅಬು ಬಕರ್ ಅಲ್ ಬಾಗ್ದಾದಿಯನ್ನು ಹಿಡಿಯಲು ಕಾದು ಕುಳಿತಿದ್ದ ಅಮೆರಿಕ ಸೇನೆ, ಆತ ವಾಯುವ್ಯ ಸಿರಿಯಾ ಪ್ರದೇಶದಲ್ಲಿರುವುದು ತಿಳಿದು ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಬಾಗ್ದಾದಿಯ ಉಗ್ರರೆಲ್ಲ ಹತನಾದರು. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುತ್ತಿದ್ದ ಬಾಗ್ದಾದಿ ಬಂಧನದ ಭೀತಿಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಾಗ್ದಾದಿ ಕಾರ್ಯಾಚರಣೆ ವೇಳೆ ಅಮೆರಿಕದ ಸೇನೆಗೆ ಸಹಾಯ ಮಾಡಿದ ಶ್ವಾನದ ಫೋಟೋವನ್ನು ಟ್ರಂಪ್ ಅವರು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಐಸಿಸ್‍ನ ನಾಯಕ ಅಬು ಬಕರ್ ಅಲ್ ಬಾಗ್ದಾದಿಯನ್ನು ಸೆರೆಹಿಡಿದು ಕೊಲ್ಲುವಲ್ಲಿ ಮಹತ್ತರವಾದ ಕೆಲಸ ಮಾಡಿದ ಅದ್ಭುತ ಶ್ವಾನದ ಚಿತ್ರವನ್ನು ನಾವು ನಿಮಗೆ ನೀಡುತ್ತಿದ್ದೇವೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

ತನ್ನ ಅಡಗು ತಾಣದಲ್ಲಿ ಅವಿತು ಕುಳಿತಿದ್ದ ಬಾಗ್ದಾದಿಯನ್ನು ಕಂಡು ಹಿಡಿದ ಅಮೆರಿಕ ಸೇನಾ ಹೆಲಿಕಾಪ್ಟರ್ ದಾಳಿ ಮಾಡಿತು. ಈ ವೇಳೆ ಹೆದರಿದ ಬಾಗ್ದಾದಿ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ತನ್ನ ಮೂವರು ಮಕ್ಕಳೊಂದಿಗೆ ಸುರಂಗದ ಒಳಗೆ ಓಡಿಹೋಗುತ್ತಿದ್ದನು. ಆದರೆ ಅವನ್ನು ಬೆನ್ನಟ್ಟಿದ ಶ್ವಾನ ದಳ ಸುರಂಗ ಕೊನೆಯಾಗುವವರೆಗೂ ಅಟ್ಟಿಸಿಕೊಂಡು ಹೋದವು. ಕೊನೆಗೆ ಸುರಂಗ ಕೊನೆಯಾಯಿತು. ಅಮೆರಿಕ ಸೇನೆ ಬಂಧಿಸುತ್ತದೆ ಎಂಬ ಭಯಕ್ಕೆ ಬಾಗ್ದಾದಿ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಅಮೆರಿಕ ಸೇನೆ ಹೇಳಿದೆ. ಇದನ್ನು ಓದಿ: ಬಾಗ್ದಾದಿ ಹತ್ಯೆ ಬೆನ್ನಲ್ಲೇ ಐಸಿಸ್‍ಗೆ ಹೊಸ ನಾಯಕ ನೇಮಕ

ಈ ವೇಳೆ ಬಾಂಬ್ ಸಿಡಿದು ಬಾಗ್ದಾದಿಯನ್ನು ಅಟ್ಟಿಸಿಕೊಂಡು ಹೋದ ಶ್ವಾನಕ್ಕೂ ಗಂಭೀರವಾಗಿ ಗಾಯವಾಗಿತ್ತು. ಅದನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಈಗ ಚಿಕತ್ಸೆ ಕೊಡಿಸಿದ್ದೇವೆ, ಈಗ ಶ್ವಾನ ಆರೋಗ್ಯವಾಗಿದೆ ಎಂದು ಅಮೆರಿಕ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರವಾಗಿ ಶ್ವೇತಭವನದಲ್ಲಿ ಮಾತನಾಡಿದ್ದ ಟ್ರಂಪ್, ಬಾಗ್ದಾದಿ ಮತ್ತೆ ಯಾವುದೇ ಮಹಿಳೆ, ಮಕ್ಕಳನ್ನು ಕೊಲ್ಲಲು ಆಗುವುದಿಲ್ಲ. ಅವನು ನಾಯಿಯಂತೆ ಸತ್ತನು. ಹೇಡಿಯಂತೆ ಸಾವನ್ನಪ್ಪಿದ್ದಾನೆ. ಈಗ ಪ್ರಪಂಚ ಇನ್ನೂ ಸುರಕ್ಷಿತವಾಗಿದೆ ಎಂದು ಹೇಳಿದ್ದರು. ಅವನು ಅಳುತ್ತಾ ಕಿರುಚುತ್ತಾ ಸುರಂಗದಲ್ಲಿ ಓಡಿ ಹೋಗಿ ಬಂಧನದ ಭೀತಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಸಾವನ್ನಪ್ಪಿದ ಎಂದು ಟ್ರಂಪ್ ಹೇಳಿದ್ದರು.

48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು, ತನ್ನದೆಯಾದ ಉಗ್ರ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದನು. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‍ನಲ್ಲಿ ಒಂದು ಪ್ರದೇಶವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದ. ಇದರ ಜೊತೆಗೆ ಹಲವರ ಶಿರಚ್ಛೇದನ ಮಾಡಿದ್ದನು.

Share This Article