ಅಹಮದಾಬಾದ್: ಅಕ್ರಮ ಕಟ್ಟಡ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರಿಗೆ ಸ್ಥಳೀಯ ಮುನ್ಸಿಪಲ್ ಕಾರ್ಪೋರೇಶನ್ ನೋಟಿಸ್ ಜಾರಿ ಮಾಡಿದೆ.
ಪ್ರಹ್ಲಾದ್ ಮೋದಿಯವರು ಗುಜರಾತ್‍ನ ಸಿಮೇಎಣ್ಣೆ ಹಾಗೂ ಪಡಿತರ ವಿತರಕ ಮಾಲೀಕ ಸಂಘದ ಹಾಲಿ ಅಧ್ಯಕ್ಷರಾಗಿದ್ದು, ತಮ್ಮ ರಾಬರೀ ಕಾಲೋನಿಯ ಪಡಿತರ ಅಂಗಡಿಯ ಬಳಿ ನಿರ್ಮಿಸುತ್ತಿದ್ದ ಕಟ್ಟಡಕ್ಕೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
Advertisement
ಈ ಸಂಬಂಧ ಹೇಳಿಕೆ ನೀಡಿದ ಪಾಲಿಕೆ ಅಧಿಕಾರಿಗಳು, ಪ್ರಹ್ಲಾದ್ ಮೋದಿಯವರು ನಿರ್ಮಿಸುತ್ತಿರುವ ಕಟ್ಟಡ ಅಕ್ರಮವಾಗಿದ್ದು, ನಿಲ್ಲಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದೆವು. ಆದರೆ ಅವರು ಕಾಮಗಾರಿಯನ್ನು ನಿಲ್ಲಿಸಲಿಲ್ಲ. ಹೀಗಾಗಿ ನೋಟಿಸ್ ಜಾರಿಗೊಳಿಸಿದ್ದಾಗಿ ಹೇಳಿದ್ದಾರೆ.
Advertisement
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಮೋದಿಯವರು, ಅಧಿಕಾರಿಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಮೊದಲು ಅದೇ ಸ್ಥಳದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದನ್ನು ತೆರವುಗೊಳಿಸಲು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆ. ಅಲ್ಲದೆ ಲಿಖಿತ ರೂಪದಲ್ಲಿಯೂ ಅರ್ಜಿ ಸಲ್ಲಿಸಿದ್ದೆ. ಈ ಕುರಿತು ಯಾವುದೇ ಅಧಿಕಾರಿಗಳು ನನ್ನ ಮನವಿಗೆ ಸ್ಪಂಧಿಸಲಿಲ್ಲ ಎಂದು ತಿಳಿಸಿದ್ದಾರೆ.
Advertisement
ಕಟ್ಟಡ ಹಳೆಯದಾಗಿದ್ದರಿಂದ ಇತ್ತೀಚೆಗೆ ಕುಸಿದು ಬಿದ್ದಿತ್ತು. ಅದೃಷ್ಟಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಒಂದು ವೇಳೆ ಪ್ರಾಣ ಹಾನಿ ಆಗುತ್ತಿದ್ದರೆ ಅವರು ದೊಡ್ಡ ವಿವಾದವನ್ನೇ ಸೃಷ್ಟಿಸುತ್ತಿದ್ದರು. ಆದ್ದರಿಂದ ಈಗ ನೂತನ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿದ್ದೇನೆ. ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ನಿಯಮಗಳನ್ನು ಪಾಲಿಸಿದ್ದು ಜಾಗವನ್ನು ಸಕ್ರಮ ಮಾಡಿಕೊಂಡಿದ್ದೇವೆ. ಈ ಕುರಿತು ಪಾಲಿಕೆಗೆ ಶುಲ್ಕ ಸಹ ಪಾವತಿಸಿದ್ದೇನೆ. ಈ ಹಿಂದೆ ನಾನು ಸಾಕಷ್ಟು ಬಾರಿ ಮನವಿ ಮಾಡಿದಾಗ ಅಧಿಕಾರಿಗಳು ಸ್ಪಂದನೆ ನೀಡಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಎಚ್ಚೆತ್ತ ಅಧಿಕಾರಿಗಳು ನೋಟಿಸ್ ಜಾರಿಮಾಡಿದ್ದಾರೆ ಎಂದು ಪ್ರಹ್ಲಾದ್ ಮೋದಿ ಪ್ರತಿಕ್ರಿಯಿಸಿದರು.