ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಅಂಬುಲೆನ್ಸ್ ಗಳು ರಸ್ತೆಯಲ್ಲಿ ಸಂಚರಿಸಲು ಯೋಗ್ಯತೆ ಇಲ್ಲ ಎನ್ನುವ ಸತ್ಯ ಹೊರಬಿದ್ದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಯಾವುದೇ ವಾಹನವಾಗಲಿ ಪ್ರತಿ ವರ್ಷ ಆರ್ ಟಿಓ ಅಧಿಕಾರಿಗಳಿಂದ ತಪಾಸಣೆ ನಡೆಸಿ `ಯೋಗ್ಯತಾ ಪ್ರಮಾಣ ಪತ್ರ’ ತೆಗೆದುಕೊಳ್ಳಬೇಕಿರುವುದು ಕಡ್ಡಾಯ. ಅದರಲ್ಲಿಯೂ ಅಂಬುಲೆನ್ಸ್ ಗಳು ತಪ್ಪದೆ ತಪಾಸಣೆ ನಡೆಸಿ ಪ್ರಮಾಣ ಪತ್ರ ಪಡೆಯಲೇಬೇಕು.
Advertisement
ಗುರುವಾರ ನಾಲ್ಕು ಅಂಬುಲೆನ್ಸ್ ಗಳನ್ನು ತಪಾಸಣೆಗೆಂದು ಮಂಡ್ಯ ಆರ್ ಟಿಓ ಕಚೇರಿ ಆವರಣಕ್ಕೆ ತರಲಾಗಿತ್ತು. ಈ ವೇಳೆ ಮೋಟಾರು ವಾಹನ ನಿರೀಕ್ಷಕ ಸದ್ರುಲ್ಲಾ ಷರೀಪ್ ಅವರು ತಾವೇ ಸ್ವತಃ ವಾಹನ ಚಲಾಯಿಸಿ ನೋಡಿದಾಗ ವಾಹನ ಹಾಳಾಗಿರುವುದು ಗೊತ್ತಾಗಿದೆ.
Advertisement
Advertisement
ಬ್ರೇಕ್, ಚಕ್ರ, ವಾಹನದ ಹೊರಭಾಗ ಸೇರಿದಂತೆ ವಾಹನದ ಹಲವು ಬಿಡಿಭಾಗಗಳು ಹಾಳಾಗಿದೆ. ಇಂತಹ ಅಂಬುಲೆನ್ಸ್ ನಿಂದ ರೋಗಿಗಳಿಗೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂಬ ಹಿನ್ನೆಲೆಯಲ್ಲಿ ಯೋಗ್ಯತಾ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕೃತಗೊಳಿಸಲಾಗಿದೆ. ಅಲ್ಲದೆ ಈ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಈ ನಾಲ್ಕು ವಾಹನ ಸ್ಥಿತಿ ಸರಿಯಿಲ್ಲ. ಕೂಡಲೇ ವಾಹನದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ನಂತರ ಬಂದು ತಪಾಸಣೆ ನಡೆಸಬೇಕೆಂದು ಸೂಚಿಸಲಾಗಿದೆ.
Advertisement
ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿರುವ ಎಲ್ಲ ಅಂಬುಲೆನ್ಸ್ ಗಳನ್ನು ಆರ್ ಟಿಓ ಕಚೇರಿ ಆವರಣಕ್ಕೆ ತಂದು ಪರಿಶೀಲಿಸಲು ಸೂಚಿಸಲಾಗಿದೆ. ಜನರ ಜೀವ ರಕ್ಷಕವಾಗಬೇಕಿದ್ದ ಅಂಬುಲೆನ್ಸ್ ಗಳ ದುಸ್ಥಿತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಎದುರಾಗಿದೆ.
ರಾಜ್ಯ ಸರ್ಕಾರ ಕೂಡಲೇ ರಾಜ್ಯದಲ್ಲಿರುವ ಎಲ್ಲ 108 ಅಂಬುಲೆನ್ಸ್ ಗಳ ಪರಿಶೀಲನೆಗೆ ಗಮನಹರಿಸಬೇಕು. ಅಂಬುಲೆನ್ಸ್ ಗಳ ಗುಣಮಟ್ಟ ಕಾಯ್ದುಕೊಳ್ಳದೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv