ಮಂಡ್ಯ: ಅಪಘಾತದಲ್ಲಿ ಗಾಯಗೊಂಡು ಇಡೀ ರಾತ್ರಿ ನರಳಾಡಿದ್ರೂ ಸ್ಥಳಕ್ಕೆ ಬಂದಿದ್ದ ಆಂಬುಲೆನ್ಸ್ ಸಿಬ್ಬಂದಿ ಕೂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕ ಸಿಟಿ ಕ್ಲಬ್ ಎದುರು ಅಪರಿಚಿತ ವ್ಯಕ್ತಿಯೊಬ್ಬ ಅಪಘಾತದಲ್ಲಿ ಗಾಯಗೊಂಡು ರಸ್ತೆ ಪಕ್ಕ ಬಿದ್ದಿದ್ದರು. ತಡರಾತ್ರಿ ಅಪಘಾತ ನಡೆದಿದ್ದು, ಸಾರ್ವಜನಿಕರು ಈ ಬಗ್ಗೆ ಆಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ರಾತ್ರಿಯೇ ಸ್ಥಳಕ್ಕೆ ಬಂದ ಆಂಬುಲೆನ್ಸ್ ಸಿಬ್ಬಂದಿ ಹೆಚ್ಚು ಗಾಯವಾಗಿಲ್ಲ, ಎದ್ದು ಹೋಗುತ್ತಾನೆ ಅಂತಾ ಹೇಳಿ ನಿರ್ಲಕ್ಷ್ಯದಿಂದ ಹೊರಟು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಂಜಾನೆ ಐದೂವರೆ ಸುಮಾರಿಗೆ ವಿಷಯ ತಿಳಿದ ಮಂಡ್ಯ ತಾಲೂಕು ವೈದ್ಯಾಧಿಕಾರಿ ಶಶಿಧರ್ ಸ್ಥಳಕ್ಕೆ ಆಗಮಿಸಿ, ಮತ್ತೆ ಆಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅವರು ಸ್ಥಳಕ್ಕೆ ಬಂದ ನಂತರವೂ ಆಂಬುಲೆನ್ಸ್ ತಡವಾಗಿ ಆಗಮಿಸಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಿಧರ್, ನಾನು ಕರೆ ಮಾಡಿದಾಗ ಒಂದು ಆಂಬುಲೆನ್ಸ್ ನಂಬರ್ ಸ್ವಿಚ್ ಆಫ್ ಆಗಿತ್ತು ಹಾಗೂ ರಾತ್ರಿಯೇ ಆಂಬುಲೆನ್ಸ್ ಸ್ಥಳಕ್ಕೆ ಬಂದು ಗಾಯಗೊಂಡಿದ್ದ ವ್ಯಕ್ತಿಯನ್ನು ಇಲ್ಲಿಯೇ ಬಿಟ್ಟು ಹೋದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡುತ್ತೇನೆ. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.