ಕ್ಷೇಮವಾಗಿ 7 ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗ್ಳೂರಿಗೆ ತಲುಪಿಸಿದ ಅಂಬುಲೆನ್ಸ್ ಚಾಲಕ

Public TV
2 Min Read
smg ambulance child

– 3 ಗಂಟೆಯಲ್ಲಿ 250 ಕಿ.ಮೀ ಪಯಣ

ಬೆಂಗಳೂರು: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 7 ದಿನದ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸುರಕ್ಷಿತವಾಗಿ ಅಂಬುಲೆನ್ಸ್‌ನಲ್ಲಿ ಕರೆತರಲಾಗಿದೆ. ಕೇವಲ 3 ಗಂಟೆಯಲ್ಲಿ 350 ಕಿ.ಮೀ ಪಯಣ ಮಾಡಿ ಮಗುವಿನ ಜೀವ ಉಳಿಸಿದ ಚಾಲಕ ಸದ್ದಾಂ ಹುಸೇನ್ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅಂಬುಲೆನ್ಸ್ ಚಾಲಕ ಸದ್ದಾಂ ಹುಸೇನ್, ಮಗುವನ್ನ ಯಶಸ್ವಿಯಾಗಿ ಆಸ್ಪತ್ರೆಗೆ ತಲುಪಿಸಿರುವ ಖುಷಿಯಿದೆ. ಬೆಳಗ್ಗೆ 9:15ಕ್ಕೆ ಶಿವಮೊಗ್ಗದಿಂದ ಹೊರಟು 12:25ಕ್ಕೆ ಬೆಂಗಳೂರಿಗೆ ತಂದಿದ್ದೇವೆ. ಮಗುವನ್ನು ಅಂಬುಲೆನ್ಸ್‌ನಲ್ಲಿ ಇಲ್ಲಿಯವರೆಗೆ ಕರೆತರುವುದು ತುಂಬಾ ಚಾಲೆಂಜಿಂಗ್ ಆಗಿತ್ತು. ಮಗುವನ್ನು ಸುರಕ್ಷಿತವಾಗಿ ಕರೆತರಬೇಕು ಜೊತೆಗೆ ಸ್ಪೀಡ್ ಆಗಿಯೂ ಬರಬೇಕು. ದೇವರ ದಯೆ ಮಗು ಉಳಿಯಲಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿದ್ದರೆ ಇನ್ನಷ್ಟು ಬೇಗ ಆಸ್ಪತ್ರೆಗೆ ಬರಬಹುದಿತ್ತು. ಸ್ವಲ್ಪ ಸಿಟಿಯಲ್ಲಿ ತಡವಾಗಿದೆ. ಮಗು ಆರೋಗ್ಯವಾಗಿರಲಿದೆ ಅನ್ನೋ ನಂಬಿಕೆಯಿದೆ ಎಂದು ಹೇಳಿದರು.

smg ambulance child 1

ಅರ್ಧ ಗಂಟೆ ಆಸ್ಪತ್ರೆ ಹೊರಗಿದ್ದ ಮಗು:
ಶಿವಮೊಗ್ಗದಿಂದ ಇಂದು ಜಯದೇವ ಆಸ್ಪತ್ರೆಗೆ ಹೋಗುವ ಮೊದಲು ಮಗುವನ್ನು ಇಂದಿರಾಗಾಂಧಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಮಗುವನ್ನು ಸುಮಾರು ಅರ್ಧ ಗಂಟೆ ಆಸ್ಪತ್ರೆ ಹೊರಗೆಯೇ ಇರಿಸಲಾಗಿತ್ತು. ಬೇಡ್ ಇಲ್ಲವೆಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದು ತಡವಾಯ್ತು.

ಈ ಬಗ್ಗೆ ಅಂಬುಲೆನ್ಸ್ ಚಾಲಕ ಮಾತನಾಡಿ, ಝೀರೋ ಟ್ರಾಫಿಕ್ ಯಾಕೆ ಬೇಕಿತ್ತು? ಪೊಲೀಸನವರು ಹಾಗೂ ಜನರು ಸಹಾಯ ಮಾಡಿದ್ದಾರೆ. ಆದರೆ ಬೆಡ್ ಇಲ್ಲವೆಂದು ವೈದ್ಯರು ಅರ್ಧ ಗಂಟೆ ಮಗುವನ್ನು ಹೊರಗಡೆ ನಿಲ್ಲಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

smg ambulance child 2

ಮಗುವನ್ನು ದಾಖಲಿಸಿಕೊಂಡ ಬಳಿಕ ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯ ಪ್ರಹ್ಲಾದ್ ಅವರು ಮಾತನಾಡಿ, ಮಗು ತೂಕ 1.8 ಕೆಜಿ ಇರುವುದರಿಂದ ಎನ್‍ಐಸಿಯುನಲ್ಲಿ ದಾಖಲು ಮಾಡಿಕೊಂಡಿದ್ದೇವೆ. ಮಗುವಿಗೆ ಹೃದಯದಲ್ಲಿ ರಂಧ್ರ ಇರುವ ಹಿನ್ನೆಲೆ ಕೆಟ್ಟ ರಕ್ತ ಮತ್ತು ಶುದ್ಧ ರಕ್ತ ಮಿಶ್ರಣವಾಗಿದೆ. ಹೀಗಾಗಿ ಮಗುವಿನ ದೇಹದ ಎಲ್ಲ ಅವಯವಗಳಿಗೆ ಆಮ್ಲಜನಕದ ಸಹಿತ ರಕ್ತ ಕೊರತೆಯಿದೆ. ಇದಕ್ಕಾಗಿ ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯ ಅಗತ್ಯ ಇದೆ ಎಂದು ತಿಳಿಸಿದರು.

ಎನ್‍ಐಸಿಯುವಿನಲ್ಲಿ ಮಗುವಿಗೆ ಸತತ 7ರಿಂದ 10ದಿನಗಳ ಕಾಲ ಹಾರೈಕೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾರೈಕೆ ನಂತರ ಹೃದಯ ಸಂಬಂಧ ಚಿಕಿತ್ಸೆ ಮತ್ತು ಸರ್ಜರಿಗೆ ಜಯದೇವ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗುತ್ತದೆ. ಸದ್ಯ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಸೂಕ್ತ ಹಾರೈಕೆ ಆರಂಭವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *