ಬೆಂಗಳೂರು: ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ದುಂಡಾವರ್ತನೆ ತೋರಿದ ಚಾಲಕನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಮಡಿವಾಳದಲ್ಲಿ ನಡೆದಿದೆ.
ಸಂದೀಪ್ ಪಾಟೀಲ್ ಮದ್ಯ ಸೇವಿಸಿ ಅಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕ. ಮಹಾರಾಷ್ಟ್ರ ಮೂಲದ ಅಂಬುಲೆನ್ಸ್ ಚಾಲಕನಾಗಿರುವ ಸಂದೀಪ್, ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಮಡಿವಾಳದ ಮೂಲಕ ನಗರಕ್ಕೆ ಆಗಮಿಸುತ್ತಿದ್ದನು.
ಬೆಂಗಳೂರಿನ ಮಡಿವಾಳ ಸರ್ಕಲ್‍ನಲ್ಲಿ ಚೆಕ್ಕಿಂಗ್ ನಡೆಯುತ್ತಿತ್ತು. ಈ ವೇಳೆ ಪೊಲೀಸರನ್ನು ಕಂಡ ಸಂದೀಪ್ ಪಾಟೀಲ್ ವಾಹನ ಬಿಟ್ಟು ಓಡಲು ಯತ್ನಿಸಿದ. ಓಡುತ್ತಿದ್ದ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಲ್ಕೊಮೀಟರ್ ಚೆಕ್ಕಿಂಗ್ ವೇಳೆ ಚಾಲಕ ಮದ್ಯಪಾನ ಮಾಡಿರೋದು ಪತ್ತೆಯಾಗಿದೆ.
ಬಳಿಕ ಸಂದೀಪ್ ಸಂಚಾರಿ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ಈ ವೇಳೆ ಚಾಲಕ ಪೊಲೀಸರನ್ನೇ ತಳ್ಳಾಡಿದ್ದಾನೆ. ಬಳಿಕ ಮಡಿವಾಳ ಸಂಚಾರಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಾಹನ ಜಪ್ತಿ ಮಾಡಿದ್ದಾರೆ.