ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದ ರಾಯುಡು- ಎಚ್‍ಡಿಎಗೆ ಪತ್ರ

Public TV
2 Min Read
Ambati Rayudu

ಹೈದರಾಬಾದ್: 2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆಡಲು ಅವಕಾಶ ನೀಡಲಿಲ್ಲವೆಂದು ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಈಗ ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದಿದ್ದಾರೆ.

ಹೈದರಾಬಾದ್ ಕ್ರಿಕೆಟ್ ಮಂಡಳಿ (ಎಚ್‍ಡಿಎ)ಗೆ ಪತ್ರ ಬರೆದಿರುವ ಆಂಧ್ರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು, ಜೂನ್ ತಿಂಗಳಲ್ಲಿ ತುಂಬಾ ಭಾವನಾತ್ಮಕವಾಗಿ ನಿವೃತ್ತಿ ಘೋಷಿಸಿದ್ದೆ. ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತೇನೆ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ ಆಡಲು ನಾನು ಸಿದ್ಧರುವೆ ಎಂದು ಮನವಿ ಮಾಡಿಕೊಂಡಿದ್ದಾರೆ.

ambati rayudu

ನನ್ನ ಕ್ರಿಕೆಟ್ ವೃತ್ತಿ ಜೀವನದ ಕಠಿಣ ಸಂದರ್ಭಗಳಲ್ಲಿ ಜೊತೆಗಿದ್ದ ಚೆನ್ನೈ ಸೂಪರ್ ಕಿಂಗ್ಸ್, ವಿವಿಎಸ್ ಲಕ್ಷ್ಮಣ್ ಹಾಗೂ ನೊಯಿಲ್ ಡೇವಿಡ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಅವರು ನನ್ನ ದುಡಿಕಿನ ನಿರ್ಧಾರವನ್ನು ತಿಳಿಸಿಕೊಟ್ಟಿದ್ದಾರೆ. ಮುಂಬರುವ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ಪರ ಆಡುತ್ತಿದ್ದೇನೆ. ಸೆಪ್ಟೆಂಬರ್ 10ರಿಂದ ಹೈದರಾಬಾದ್ ತಂಡಕ್ಕೆ ಲಭ್ಯನಾಗಲಿದ್ದೇನೆ ಎಂದು ರಾಯುಡು ಹೇಳಿದ್ದಾರೆ.

ಈ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್‍ಡಿಎ ಮುಖ್ಯ ಆಯ್ಕೆದಾರ ನಿಯೋಲ್ ಡೇವಿಸ್ ಅವರು, ರಾಯುಡು ಇನ್ನೂ 5 ವರ್ಷ ಕ್ರಿಕೆಟ್ ಆಡುವ ಕ್ಷಮತೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ambati rayudu

ಅಂಬಟಿ ರಾಯುಡು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಟೀಂ ಇಂಡಿಯಾ 15ರ ಬಳಗದಲ್ಲಿ ರಾಯುಡು ಬದಲಿಗೆ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಅವರಿಗೆ ಬಿಸಿಸಿಐ ಮಣೆ ಹಾಕಲಿಲ್ಲ.

4ನೇ ಸ್ಥಾನಕ್ಕೆ ತ್ರಿ ಡೈಮೆನ್ಶನ್ ಪ್ಲೇಯರ್ ಅಗತ್ಯವಿತ್ತು. ಹೀಗಾಗಿ ಅಂಬಟಿ ರಾಯುಡು ಬದಲು ವಿಜಯ್ ಶಂಕರ್ ಗೆ ಸ್ಥಾನ ನೀಡಲಾಗಿತ್ತು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಪ್ರಸಾದ್ ಅವರ ಹೇಳಿಕೆ ರಾಯುಡು ಅವರನ್ನು ಕೆರಳಿಸಿತ್ತು. ಹೀಗಾಗಿ ರಾಯುಡು `3ಡಿ ಗ್ಲಾಸ್ (ತ್ರಿ ಡೈಮೆನ್ಶನ್) ಖರೀದಿಸಿ ವಿಶ್ವಕಪ್ ಪಂದ್ಯ ನೋಡುವುದಾಗಿ ಟ್ವೀಟ್ ಮಾಡಿದ್ದರು.

ಅಂಬಟಿ ರಾಯುಡು ಟ್ವೀಟ್ ಸಖತ್ ಟ್ರೋಲ್ ಆಗಿತ್ತು. ಟೂರ್ನಿ ನಡುವೆ ವಿಜಯ್ ಶಂಕರ್ ಗಾಯಗೊಂಡಾಗ ರಾಯುಡು ಬದಲು ಮಯಾಂಕ್ ಅಗರ್ವಾಲ್‍ಗೆ ಅವಕಾಶ ನೀಡಲಾಯಿತು. ಈ ವೇಳೆ ಮತ್ತೆ ರಾಯುಡು 3ಡಿ ಗ್ಲಾಸ್ ವಿಚಾರ ಟ್ರೋಲ್ ಆಯಿತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಕೂಡ ಪರೋಕ್ಷವಾಗಿ ರಾಯುಡು ಕಾಲೆಳೆದು, ತಮ್ಮ ತಂಡಕ್ಕೆ ಸೇರಿಕೊಳ್ಳುವಂತೆ ವಿಶೇಷ ಆಫರ್ ನೀಡಿ ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *