ಮಂಡ್ಯದ ಮಗನಿಗೆ ತವರಿನ ಮಣ್ಣಿನ ತಿಲಕ

Public TV
2 Min Read
ambi tilak copy

-ಕಂಬನಿ ಮಿಡಿದು ಕಳುಹಿಸಿಕೊಟ್ಟ ಮಂಡ್ಯದ ಜನ

ಮಂಡ್ಯ: ಶನಿವಾರದಂದು ನಿಧನ ಹೊಂದಿದ ಮಂಡ್ಯದ ಗಂಡು ಅಂಬರೀಶ್ ಅವರ ಪಾರ್ಥೀವ ಶರೀರವನ್ನ ಭಾನುವರ ಮಂಡ್ಯದ ವಿಶ್ವೇಶರಯ್ಯ ಕ್ರೀಡಾಂಗಣಕ್ಕೆ ತರಲಾಗಿತ್ತು. ಇಡೀ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡರು. ಬರೋಬ್ಬರಿ 18 ಗಂಟೆಗಳ ಸಾರ್ವಜನಕ ದರ್ಶನದ ನಂತರ ಅಂಬಿಯ ಪಾರ್ಥಿವ ಶರೀರದ ಹಣೆಗೆ ಮಂಡ್ಯದ ಮಣ್ಣಿನ ತಿಲಕವಿಟ್ಟು ಬೆಂಗಳೂರಿಗೆ ಕೊಂಡೊಯ್ಯಲಾಯ್ತು. ಈ ವೇಳೆ ನೆರೆದಿದ್ದ ಬಹುತೇಕ ಅಭಿಮಾನಿಗಳ ಕಣ್ಣುಗಳು ಒದ್ದೆಯಾಗಿದ್ದವು.

ಮಂಡ್ಯ ಜನರ ಒತ್ತಾಸೆಯಂತೆ ಅಂಬರೀಶ್ ಅವರ ತವರಿಗೆ ಪಾರ್ಥಿವ ಶರೀರವನ್ನು ತರಲಾಗಿತ್ತು. ಭಾನುವಾರ ಸಂಜೆಯಿಂದ ಇಲ್ಲಿನ ಸರ್ ಎಂ.ವಿ. ಮೈದಾನದಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಇಂದು ಬೆಳಗ್ಗೆ 10 ಗಂಟೆವೆರಗೂ ಸುಮಾರು 18 ಗಂಟೆಗಳ ಕಾಲ ಅಭಿಮಾನಿಗಳು ಅಂಬಿಯ ಅಂತಿಮ ದರ್ಶನ ಪಡೆದರು. ಮಂಡ್ಯ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಆಗಮಿಸಿದ್ದ 2 ಲಕ್ಷಕ್ಕೂ ಹೆಚ್ಚು ಜನರು ಪಾರ್ಥಿವ ಶರೀರದ ದರ್ಶನ ಮಾಡಿದರು.

mnd ambi

ಇಡೀ ರಾತ್ರಿ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದರಿಂದ ಬೆಳಗ್ಗೆ 8 ಗಂಟೆಗೆ ಬೆಂಗಳೂರಿಗೆ ಕೊಂಡೊಯ್ಯಬೇಕಾದ ಕರ್ಣನ ಪಾರ್ಥಿವ ಶರೀರವನ್ನು 10 ಗಂಟೆವರೆಗೆ ವಿಸ್ತರಣೆ ಮಾಡಲಾಯ್ತು. ಹೀಗಾಗಿ ಇಂದು ಬೆಳಗ್ಗೆಯೂ ಸಹ ಅಪಾರ ಪ್ರಮಾಣದ ಜನರು ಸ್ಟೇಡಿಯಂಗೆ ಆಗಮಿಸಿ ಮಂಡ್ಯ ಗಂಡಿನ ದರ್ಶನ ಪಡೆದುಕೊಂಡರು.

ಬೆಳಗ್ಗೆ 8.30ರ ಸುಮಾರಿಗೆ ಸ್ಟೇಡಿಯಂಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ, ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಕಾರ ನೀಡಿದ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವ ಬಗೆಗೂ ಚಿಂತನೆ ನಡೆಸಿರುವುದಾಗಿ ಹೇಳಿದರು.

mnd ambi 3

ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯುವ ಮೊದಲು ಪುತ್ರ ಅಭಿಷೇಕ್ ಅವರು ಕ್ರೀಡಾಂಗಣದಲ್ಲಿ ಒಂದು ಸುತ್ತು ಹಾಕಿ ನೆರೆದಿದ್ದ ಜನರತ್ತ ಕೈ ಮುಗಿದು ವಂದನೆ ಸಲ್ಲಿಸಿದರು. ಬಳಿಕ ಪತ್ನಿ ಸುಮಲತಾ ಪತಿಯ ಹಣೆಗೆ ಮಂಡ್ಯದ ಮಣ್ಣಿನ ತಿಲಕ ಇಟ್ಟು ಎಲ್ಲರತ್ತ ಕೈ ಮುಗಿದು ಅಂಬಿ ಮತ್ತು ಜಿಲ್ಲೆಯ ಋಣ ಇಂದಿಗೆ ಭೌತಿಕವಾಗಿ ಮುಗಿಯಿತು ಎಂಬಂತೆ ಹೊರಟರು. ಈ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆಮಾಡಿತು.

ಇದೆಲ್ಲದರ ಮಧ್ಯೆ ಅಂಬಿಯ ಅಂತಿಮ ದರ್ಶನ ಪಡೆದುಕೊಂಡು ಹೋದ ಮತ್ತೊಬ್ಬ ಅಭಿಮಾನಿ ಮದ್ದೂರಿನ ಸುರೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ 18 ಗಂಟೆಗಳ ನಂತರ ಜಿಲ್ಲೆಯ ಜನರು ಅಂಬರೀಶ್‍ಗೆ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *