ಬೆಂಗಳೂರು: ಮಂಡ್ಯದ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಂಬರೀಶ್ ಅವರು ರಾಜಕೀಯ ನಿವೃತ್ತಿ ಪಡೆದಂತಿದೆ. ಸಚಿವ ಸ್ಥಾನದಿಂದ ಕೈಬಿಟ್ಟ ಸಿಎಂ ಸಿದ್ದರಾಮಯ್ಯ ಜೊತೆಗಿನ ಮುನಿಸಿನಿಂದ ಕಾಂಗ್ರೆಸ್ ಪಕ್ಷವನ್ನು ಕೊನೇ ಕ್ಷಣದವರೆಗೂ ರೆಬೆಲ್ ಆಗಿಯೇ ಅಂಬರೀಶ್ ಕಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಮತ್ತೆ ಎದ್ದಿದೆ.
ಮಂಡ್ಯದ ಅಭ್ಯರ್ಥಿಯಾಗಿ ಬಿ-ಫಾರ್ಮ್ ಕೊಟ್ಟರೂ ಸ್ವೀಕರಿಸದ ಅಂಬರೀಶ್ ಕಣದಿಂದ ಹಿಂದೆ ಸರಿಯೋ ಲಕ್ಷಣಗಳು ಗೋಚರಿಸಿವೆ. ಆದರೂ, ನಾಳೆ ಸಂಜೆವರೆಗೆ ಕ್ಲೈಮಾಕ್ಸ್ ಕಾದಿರಿಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಕೆಜೆ ಜಾರ್ಜ್ ನಡೆಸಿದ ಸಂಧಾನಕ್ಕೆ ಬಗ್ಗದ ಅಂಬರೀಶ್ ಇವತ್ತು ಸಿಎಂ ಸಿದ್ದರಾಮಯ್ಯನವರಿಗೆ ಬೆಲೆ ಕೊಟ್ಟಿಲ್ಲ. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಅಂಬರೀಶ್-ಸಿದ್ದರಾಮಯ್ಯ ಭೇಟಿಗೆ ವೇದಿಕೆ ಸಿದ್ಧವಾಗಿತ್ತು. ಆದರೆ ಅಂಬರೀಶ್ ಈ ಭೇಟಿಗೆ ಸೊಪ್ಪು ಹಾಕದೇ ಹೋಟೆಲ್ ಮಾಲೀಕ, ಆಪ್ತ ಸ್ನೇಹಿತ, ಎಂಎಲ್‍ಸಿ ಸಂದೇಶ್ ನಾಗರಾಜ್ ಜೊತೆ ತಮ್ಮ ನಿರ್ಧಾರವನ್ನು ಹೇಳಿದ್ದಾರೆ.
Advertisement
Advertisement
ಅಂಬಿ ಹೇಳಿದ್ದು ಏನು?
ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಸ್ಪರ್ಧೆ ಬೇಡ ಎಂದು ನಿರ್ಧಾರಕ್ಕೆ ಬಂದಿದ್ದು, ನಾಳೆ ಸಂಜೆ ವೇಳೆ ಅಧಿಕೃತವಾಗಿ ಈ ವಿಚಾರಕ್ಕೆ ಸ್ಪಷ್ಟನೆ ನೀಡುತ್ತೇನೆ. ನಾನು ಯಾರ ಪರವಾಗಿ ಟಿಕೆಟ್ ಕೇಳುವುದಿಲ್ಲ. ಕೇಳಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದೇ ಆಗುತ್ತದೆ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಇನ್ನು, ನಾನು ಪಕ್ಷ ಬಿಡಲ್ಲ. ಯಾವುದೇ ಪಕ್ಷ ಸೇರುವುದಿಲ್ಲ. ಸಿಎಂ ಅವರನ್ನು ಭೇಟಿ ಮಾಡಲು ಆಗುವುದಿಲ್ಲ ಎಂದು ಹೇಳಿ ಬೆಂಗಳೂರಿನತ್ತ ಹೊರಟಿದ್ದಾರೆ ಎಂದು ಹೋಟೆಲ್ ನಲ್ಲಿ ನಡೆದ ಮಾತುಕತೆಯ ಸಾರವನ್ನು ಸಂದೇಶ್ ನಾಗರಾಜ್ ಅವರು ಮಾಧ್ಯಮಗಳಿಗೆ ತಿಳಿಸಿದರು.
Advertisement
ಇದಕ್ಕೂ ಮುನ್ನ ಅಂಬರೀಶ್ ಬರುತ್ತಾರೆ ಎಂದು ಮೈಸೂರಿನ ಶಾರಾದಾದೇವಿ ನಗರದ ತಮ್ಮ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅರ್ಧ ತಾಸು ಕಾದು ಕುಳಿತಿದ್ದರು. ಆದರೆ ಅರ್ಧಗಂಟೆ, ಮುಕ್ಕಾಲು ಗಂಟೆಯಾದರೂ ಅಂಬರೀಶ್ ಸುಳಿವೇ ಇರಲಿಲ್ಲ. ರೋಸಿ ಹೋದ ಸಿಎಂ ಪ್ರಚಾರಕ್ಕೆ ಎದ್ದು ಹೊರ ನಡೆದರು. ಮಾಧ್ಯಮಗಳ ಪ್ರಶ್ನೆಗೆ, ಇನ್ನುಮುಂದೆ ಅಂಬರೀಶ್ ತಾನಾಗಿ ಬಂದರೆ ಮಾತನಾಡುತ್ತೇನೆ. ನಾನಾಗಿ ಹೋಗುವುದಿಲ್ಲ. ಸ್ಪರ್ಧಿಸುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಈ ಎಲ್ಲಾ ವಿದ್ಯಮಾನಗಳ ಮಧ್ಯೆ, ಅಂಬರೀಶ್ ಅವರೇ ಸ್ಪರ್ಧೆ ಮಾಡಬೇಕು. ಒಂದು ವೇಳೆ ಅಂಬರೀಷ್ ಒಪ್ಪದೇ ಇದ್ದರೆ ಅವರ ಸೂಚನೆಯಂತೆ ನಾನೇ ಸ್ಪರ್ಧೆ ಮಾಡ್ತೇನೆ ಎಂದು ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ತಿಳಿಸಿದ್ದಾರೆ.
ಮಂಡ್ಯದ ಬೆಂಬಲಿಗರು ಎಂಟು ಕಾರುಗಳಲ್ಲಿ ಮೈಸೂರಿಗೆ ತೆರಳಿ ಹಲವು ಹೊಟೇಲ್‍ಗಳಲ್ಲಿ ಅಂಬರೀಶ್ ಅವರಿಗಾಗಿ ಶೋಧ ನಡೆಸಿದರು.. ಆದರೂ ಅವರಾರಿಗೂ ಅಂಬರೀಶ್ ಸುಳಿವು ಸಿಗಲಿಲ್ಲ. ಒಟ್ಟಿನಲ್ಲಿ ಅಂಬರೀಶ್ ಯಾರ ಕೈಗೂ ಸಿಗದೇ ಹೆಸರಿಗೆ ತಕ್ಕಂಥೆ ರೆಬೆಲ್ ಆಗಿಬಿಟ್ಟಿದ್ದರು.