Connect with us

Cinema

ಯಶ್-ರಾಧಿಕಾ ಮಗುವಿಗೆ ಅಂಬಿ ರೆಡಿ ಮಾಡಿಸಿದ್ದರು ಭರ್ಜರಿ ಗಿಫ್ಟ್!

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಹುಟ್ಟುವ ಮಗುವಿಗೆ ರೆಬೆಲ್ ಸ್ಟಾರ್ ಅಂಬರೀಶ್ ಭರ್ಜರಿ ಗಿಫ್ಟ್ ವೊಂದನ್ನು ರೆಡಿ ಮಾಡಿಸಿದ್ದರು. ಸದ್ಯ ಯಶ್ ಮಗಳಿಗೆ ಈ ಉಡುಗೊರೆಯನ್ನು ಸುಮಲತಾ ಅವರು ನೀಡಿದ್ದಾರೆ.

ಅಂಬರೀಶ್ ಮತ್ತು ಯಶ್ ನಡುವಿನ ಪ್ರೀತಿ ಅಪ್ಪ-ಮಗನಂತೆ ಇತ್ತು. ಅಂಬಿ ಅಪ್ಪಾಜಿ ಕರೆದಾಗಲೆಲ್ಲಾ ಯಶ್ ಎದ್ದು ಹೊರಡುತ್ತಿದ್ದರು. ಪತ್ನಿ ರಾಧಿಕಾ ಗರ್ಭಿಣಿಯಾದಾಗಿನಿಂದ ಇವರಿಬ್ಬರ ಕುಟುಂಬದ ಒಡನಾಟ ಇನ್ನಷ್ಟು ಹೆಚ್ಚಾಗಿತ್ತು. ಸ್ನೇಹ, ಪ್ರೀತಿ ತುಂಬಿತ್ತು. ಆಗಲೇ ಅಂಬರೀಶ್ ತೊಟ್ಟಿಲು ಉಡುಗೊರೆಯನ್ನಾಗಿ ಕೊಡಲು ನಿರ್ಧರಿಸಿದ್ದರು.

ಅಂಬರೀಶ್ ಯಾರಿಗೂ ಗೊತ್ತಾಗದಂತೆ, ಯಾರಿಗೂ ತಿಳಿಯದಂತೆ ತೊಟ್ಟಿಲ ಕೆಲಸವನ್ನು ಮಾಡಿದ್ದರು. ಯಶ್ ಮತ್ತು ರಾಧಿಕಾ ಮಗುವಿಗೆ ತೊಟ್ಟಿಲನ್ನು ಮಾಡಿಸಿಟ್ಟಿದ್ದರು. ಈ ತೊಟ್ಟಿಲ ಬಗ್ಗೆ ಯಾರಿಗೂ ಕಿಂಚಿತ್ತೂ ಮಾಹಿತಿ ಇರಲಿಲ್ಲ. ಅದೆಲ್ಲ ಗೊತ್ತಾಗಿದ್ದು ಅಂಬಿ ಇಲ್ಲದ ಹೊತ್ತು ಹಾಗೂ ಯಶ್ ಮಗಳು ಈ ಲೋಕಕ್ಕೆ ಬಂದ ಈ ಘಳಿಗೆಯಲ್ಲಿ.

ಅಂಬಿ ನಿಧನವಾಗಿ ಹೆಚ್ಚು ಕಮ್ಮಿ ಹನ್ನೆರಡು ದಿನಗಳಾಗುತ್ತಿವೆ. ಅಂಬಿ ಪತ್ನಿ ಸುಮಲತಾ, ಮಗ ಅಭಿಷೇಕ್ ನಿಧಾನವಾಗಿ ಮತ್ತೆ ಸಹಜ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಅಭಿಮಾನಿಗಳೂ ಕೂಡ ಮತ್ತೆ ಬದುಕು ನಡೆಸುತ್ತಿದ್ದಾರೆ. ಅಂಬಿಯ ನೆನಪಲ್ಲೇ ದಿನಗಳನ್ನು ತಳ್ಳುತ್ತಿದ್ದಾರೆ. ಈ ನಡುವೆ ಸುಮಲತಾ ಅವರ ಮೊಬೈಲ್‍ಗೆ ವಾಟ್ಸಪ್ ಸಂದೇಶವೊಂದು ಬಂತು. ವಾಟ್ಸಾಪ್ ಸಂದೇಶದ ಜೊತೆಗೆ ತೊಟ್ಟಿಲಿನ ಚಿತ್ರವೂ ಇತ್ತು.

ಸುಮಲತಾಗೆ ನಿಜಕ್ಕೂ ಅಚ್ಚರಿ ಮತ್ತು ಕುತೂಹಲವಾಗಿತ್ತು. ತೊಟ್ಟಿಲನ್ನು ಆರ್ಡರ್ ನಾವ್ಯಾರೂ ಕೊಟ್ಟಿಲ್ಲವಲ್ಲ. ಮತ್ತೆ ತಪ್ಪಾಗಿ ಈ ಸಂದೇಶ ಬಂದಿದೆಯಾ? ಏನಿದರ ಅಸಲಿಯತ್ತು? ಹೀಗಂದುಕೊಂಡೇ ಆ ಮೊಬೈಲ್ ನಂಬರಿಗೆ ಫೋನ್ ಮಾಡಿದ್ದಾರೆ. ಆಗ ಸತ್ಯ ಗೊತ್ತಾಗಿದೆ. ಅದು ಖುದ್ದು ಅಂಬಿಯೇ ಆರ್ಡರ್ ಕೊಟ್ಟು ಮಾಡಿಸಿದ್ದ ತೊಟ್ಟಿಲು. ಅದಕ್ಕಿಂತ ಹೆಚ್ಚಾಗಿ ಈ ಆರ್ಡರ್ ಕೊಟ್ಟಿದ್ದು ಅಂಬರೀಶ್ ಎನ್ನುವುದು ಆ ಅಂಗಡಿ ಮಾಲೀಕರಿಗೆ ಗೊತ್ತಿರಲಿಲ್ಲ. ಸಂಪರ್ಕಕ್ಕಾಗಿ ಅಂಬರೀಶ್ ತಮ್ಮ ಪತ್ನಿ ಸುಮಲತಾ ಮೊಬೈಲ್ ನಂಬರ್ ಮಾಲೀಕನಿಗೆ ಕೊಟ್ಟಿದ್ದರು.

ಅಂಬರೀಶ್ ಯಶ್ ಮತ್ತು ರಾಧಿಕಾ ಮಗುವಿಗೆ ತೊಟ್ಟಿಲನ್ನು ಕಾಣಿಕೆಯನ್ನಾಗಿ ಕೊಟ್ಟಿದ್ದರು. ಯಾವಾಗ ಸುಮಲತಾಗೆ ಈ ವಿಷಯ ಗೊತ್ತಾಯಿತೋ, ಅವರು ಯಶ್‍ಗೆ ಫೋನ್ ಮಾಡಿ ಹೇಳಿದ್ದೊಂದೇ ಮಾತು, `ನಿಮ್ಮ ಅಪ್ಪಾಜಿ ಸ್ವರ್ಗದಿಂದಲೇ ನಿಮ್ಮ ಮಗಳಿಗೆ ತೊಟ್ಟಿಲು ಕಳಿಸಿದ್ದಾರೆ. ಮಗಳು ಪುಣ್ಯವಂತೆ. ಅಲ್ವಾ.?’ ತಾಯಿ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೇ ಯಶ್ ಮೌನವಾದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *