ಬೆಳಗಾವಿ: ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕೊನೆಯಾಸೆ ನನಸಾಗಿದೆ. ಅಂಬಿ ಕನಸಿನಂತೆ ಯಶ್-ರಾಧಿಕಾ ಮಗಳಿಗೆ ಅಂಬಿ ತಾತನ ಗಿಫ್ಟ್ ರೆಡಿಯಾಗಿದ್ದು ಇಂದು ಬೆಂಗಳೂರು ತಲುಪಲಿದೆ.
ಮಂಡ್ಯದ ಗಂಡು ದಿವಂಗತ ನಟ ಅಂಬರೀಶ್ ಅವರ ಕನಸು ನನಸಾಗಿದೆ. ನಟಿ ರಾಧಿಕಾ ಪಂಡಿತ್ ನಮ್ಮ ಮನೆಯ ಮಗಳು ಅವರ ಮಗುವಿನ ತೊಟ್ಟಿಲು ಶಾಸ್ತ್ರಕ್ಕೆ ನಮ್ಮ ಮನೆಯಿಂದಲೇ ತೊಟ್ಟಿಲು ಹೋಗಬೇಕು ಎಂಬುದು ಅಂಬರೀಶ್ ಅವರ ಆಸೆಯಾಗಿತ್ತು. ಅದರಂತೆ ರಾಧಿಕಾ-ಯಶ್ ಮಗಳಿಗಾಗಿ ಅಂಬಿ ಆರ್ಡರ್ ಮಾಡಿದ್ದ ತೊಟ್ಟಿಲು ಸಿದ್ಧಗೊಂಡಿದೆ. ಕಿತ್ತೂರು ಕಲ್ಮಠದಲ್ಲಿ ಹೆಣ್ಣು ಮಕ್ಕಳು ವಿಶೇಷ ಪೂಜೆ ಮಾಡಿ ತೊಟ್ಟಿಲನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಶೇಷ ತೊಟ್ಟಿಲು ಇಂದು ಅಂಬಿ ಮನೆ ತಲುಪಲಿದೆ.
ಕಲಘಟಗಿಯ ಸಾಹುಕಾರ್ ಕುಟುಂಬದ ಗರಡಿಯಲ್ಲಿ ಟಿಕ್‍ವುಡ್‍ನಿಂದ ಈ ತೊಟ್ಟಿಲು ತಯಾರಿಸಲಾಗಿದೆ. ಸಾವಯವ ಬಣ್ಣದಿಂದ ಲೇಪನವಾದ ಪೇಂಟಿಂಗ್, ವಿಷ್ಣುವಿನ ದಶಾವತಾರವನ್ನು ತೊಟ್ಟಿಲಿನಲ್ಲಿ ಕೆತ್ತಲಾಗಿದೆ. ಈ ತೊಟ್ಟಿಲು ವಿಭಿನ್ನ ಡಿಸೈನ್‍ಗಳಿಂದ ಕೂಡಿದ್ದು ಪ್ರಾಚೀನ ಕಾಲದ ಶೈಲಿಯಲ್ಲಿ ತಯಾರಿಸಲಾಗಿದೆ. ಇಬ್ಬರು ಸೇರಿಕೊಂಡು ಮಾಡಿರುವ ಈ ತೊಟ್ಟಿಲಿಗೆ ಖರ್ಚಾಗಿದ್ದು 1 ಲಕ್ಷದ 20 ಸಾವಿರ ರೂಪಾಯಿ. ಅದೂ ಅಲ್ಲದೇ ನೂರು ವರ್ಷಗಳ ಕಾಲ ಈ ಬಣ್ಣಕ್ಕೆ ಏನೂ ಆಗುವುದಿಲ್ಲ ಎನ್ನುವುದು ವಿಶೇಷ.
ಒಬ್ಬ ತಂದೆಗೆ ಮಗಳ ಕಾಳಜಿ ಎಷ್ಟಿರುತ್ತೆ ಅವಳ ಖುಷಿಗಾಗಿ ತಂದೆ ಏನೆಲ್ಲಾ ಮಾಡ್ತಾನೆ ಎಂಬುದನ್ನು ತಂದೆಯ ಸ್ಥಾನದಲ್ಲಿದ್ದುಕೊಂಡು ಅಂಬಿ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ನಟಿ ರಾಧಿಕಾ ಮಗಳು ಈ ತೊಟ್ಟಿಲಲ್ಲಿ ಆಡಿ ನಲಿದು ಚೆನ್ನಮ್ಮನಂತಾಗಲಿ ಎಂಬುದು ಅಂಬಿ ಅಭಿಮಾನಿಗಳ ಆಸೆಯಾಗಿದೆ.
https://www.youtube.com/watch?v=8O7gBadMmdI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv