ಬೆಂಗಳೂರು: ಮಾಜಿ ಸಚಿವ, ಸ್ಯಾಂಡಲ್‍ವುಡ್ ಟ್ರಬಲ್ ಶೂಟರ್, ಬೊಂಬೆ ಆಡ್ಸೋನು ಮೇಲೆ ಇದ್ದಾನೆ ಎಂದು ಹೇಳಿ ಕನ್ನಡಿಗರನ್ನು ಇಲ್ಲಿಯವರೆಗೆ ರಂಜಿಸಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅಂಬರೀಶ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ನೆರವೇರಿಸಿದರು. ಕುಟುಂಬಸ್ಥರು, ಚಿತ್ರೋದ್ಯಮದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಅಭಿಮಾನಿಗಳು ಈ ವೇಳೆ ಭಾಗಿಯಾಗಿದ್ದರು.
Advertisement
ತಲತಲಾಂತರಗಳಿಂದ ಅಂಬಿ ಮನೆತನದ ಪೌರೋಹಿತ್ಯ ಮಾಡುತ್ತಿರುವ ಮದ್ದೂರು ಮೂಲದ ಪುರೋಹಿತರಾದ ಚಿಕ್ಕ ಹುಚ್ಚಯ್ಯ, ಕೋಣಪ್ಪ ಪೂಜಾರಿ ನೇತೃತ್ವದಲ್ಲಿ ಅಂತ್ಯಸಂಸ್ಕಾರದ ಅಂತಿಮ ವಿಧಿವಿಧಾನಗಳು ನಡೆಯಿತು. ಪೂಜಾ ವಿಧಿವಿಧಾನ ನೆರವೇರಿಸಿ, ಅಂಬರೀಶ್ ಚಿತೆಗೆ ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಅಲ್ಲಿ ಸೇರಿದ್ದ ಜನರು ಕಂಬನಿ ಮಿಡಿದರು.
Advertisement
Advertisement
ಅಂತ್ಯಕ್ರಿಯೆಗೆ ಶನಿವಾರದಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಥಳ ಪರಿಶೀಲನೆ ಮಾಡಿದ್ದರು. ವರನಟ ಡಾ.ರಾಜ್‍ಕುಮಾರ್ ಸಮಾಧಿ ಸಮೀಪದಲ್ಲಿ ಅಂತ್ಯಕ್ರಿಯೆ ಜಾಗ ಗುರುತು ಮಾಡಲಾಗಿತ್ತು.
Advertisement
ಸಿಮೆಂಟ್, ಇಟ್ಟಿಗೆಯಿಂದ 16*16 ಸುತ್ತಳತೆಯಲ್ಲಿ ನಿರ್ಮಾಣಗೊಂಡಿದ್ದ ಚಿತೆಗೆ ವಿಕಿ ಆರ್ಟ್ಸ್ ವತಿಯಿಂದ ಕಲಾಸ್ಪರ್ಶ ನೀಡಲಾಗಿತ್ತು. ಅಂಬಿ ಅಭಿಮಾನಿಗಳಾದ 5 ಜನ ಕಲಾವಿದರು ಅಂಬರೀಶ್ ಹಾಗೂ ಸೂರ್ಯ ಮುಳುಗುತ್ತಿರುವ ಪರಿಸರ ದೃಶ್ಯವನ್ನು ಚಿತೆಯ ಮೇಲೆ ಬಿಡಿಸಿ, ಕನ್ನಡ ಚಿತ್ರರಂಗದ ಭೀಷ್ಮ ಇನ್ನಿಲ್ಲ ಅಂತ ಬರೆದಿದ್ದರು. ಎಲ್ಲರಿಗೂ ಕಾಣಿಸಲೆಂದು ಒಂದೂವರೆ ಅಡಿ ಎತ್ತರದಲ್ಲಿ ಚಿತೆಯನ್ನು ನಿರ್ಮಾಣ ಮಾಡಲಾಗಿತ್ತು. ಚಿತೆಗೆ 500 ಕೆ.ಜಿ ಕಟ್ಟಿಗೆಯಲ್ಲಿ 300 ಶ್ರೀಗಂಧವನ್ನು ಬಳಸಲಾಗಿತ್ತು. ಉಳಿದ 200 ಕೆಜಿ ಹುಣಸೆ, ಸಾಮೆ, ಸರ್ವೆ ಹಾಗೂ ನೀಲಗಿರಿ ಮರಗಳ ಕಟ್ಟಿಗೆ ಬಳಕೆ ಮಾಡಲಾಗಿತ್ತು. ಜೊತೆಗೆ 30 ಕೆ.ಜಿ. ಕರ್ಪೂರವನ್ನು ಚಿತೆಗೆ ಹಾಕಲಾಗಿತ್ತು.
ನಟಸಾರ್ವಭೌಮ ವರನಟ ರಾಜಕುಮಾರ್ ಅವರ ಸಮಾಧಿಯ ಎದುರುಗಡೆ ಇರುವ ಒಂದೂವರೆ ಎಕರೆ ಸರ್ಕಾರಿ ಭೂಮಿಯಲ್ಲಿ ಅಂಬರೀಶ್ ಅಂತ್ಯಕ್ರಿಯೆ ನಡೆಯಲಿದೆ. ಇಲ್ಲಿಯೇ ಅಂಬಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಬರಲಿದ್ದಾರೆ ಎಂದು ಅರಿತಿದ್ದ ಪೊಲೀಸರು ಸ್ಟುಡಿಯೋ ಸುತ್ತ ಬ್ಯಾರಿಕೇಡ್ ಹಾಕಿದ್ದರು. ಅಭಿಮಾನಿಗಳು ಹೊರಗೆ ನಿಂತುಕೊಂಡೇ ಅಂತ್ಯಕ್ರಿಯೆ ವೀಕ್ಷಿಸಲು ಅನುಕೂಲವಾಗುವಂತೆ ನಾಲ್ಕು ಕಡೆಗಳಲ್ಲಿ ಎಲ್‍ಇಡಿ ಟಿವಿ ಅಳವಡಿಲಾಗಿತ್ತು. ಇದಕ್ಕೆ ಪೂರಕವಾಗಿ ಕಂಠೀರವ ಸ್ಟುಡಿಯೋದಲ್ಲಿ 15 ಸಿಸಿಟಿವಿ ಕ್ಯಾಮೆರಾವನ್ನು ಹಾಕಲಾಗಿತ್ತು. ಅಂತ್ಯಕ್ರಿಯೆ ಸ್ಥಳದಲ್ಲಿ ಕುಟುಂಬಸ್ಥರಿಗೆ 300 ಆಸನ ಹಾಗೂ ಸಾರ್ವಜನಿಕರಿಗೆ 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಇಂದು ಬೆಳಗ್ಗೆ 10.53ಕ್ಕೆ ವಾಯು ಸೇನೆಯ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಎಚ್‍ಎಎಎಲ್ ಪಾರ್ಥಿವ ಶರೀರವನ್ನು ಸಾಗಿಸಲಾಯ್ತು. 25 ನಿಮಿಷದಲ್ಲಿ ಎಚ್‍ಎಎಲ್ ತಲುಪಿದ ಶವವನ್ನು ಅಂಬುಲೆನ್ಸ್ ಮೂಲಕ ಕಂಠೀರವ ಸ್ಟೇಡಿಯಂಗೆ ತರಲಾಯಿತು.
ಪುಷ್ಪಾಂಲಕೃತ ವಾಹನದಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನು ಇಟ್ಟು, ಮಧ್ಯಾಹ್ನ 12:30 ಕಂಠೀರವ ಸ್ಟೇಡಿಯಂನಿಂದ ಮೆರವಣಿಗೆ ಪ್ರಾರಂಭಿಸಲಾಯಿತು. ಅಭಿಮಾನಿಗಳು ವಾಹನದ ಕಡೆಗೆ ನುಗ್ಗಬಾರದು ಎನ್ನುವ ಉದ್ದೇಶದಿಂದ ಭಾರೀ ಭದ್ರತೆ ಒದಗಿಸಲಾಗಿತ್ತು.
ಕಂಠೀರವ ಕ್ರೀಡಾಂಗಣದಿಂದ ಹೊರಟ ಮೆರವಣಿಗೆ ಕೆಜಿ ರೋಡ್ ಮೂಲಕ ಸಾಗಿ ಹಡ್ಸನ್ ಸರ್ಕಲ್, ಹಲಸೂರು ಗೇಟ್ ಪಿಎಸ್, ಪೊಲೀಸ್ ಕಾರ್ನರ್, ಮೈಸೂರ್ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಪ್ಯಾಲೇಸ್ ರೋಡ್ ಮೂಲಕ ಸಾಗಿತು. ಬಳಿಕ ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕಲ್, ಓಲ್ಡ್ ಹೈಗ್ರೌಂಡ್ಸ್ ಪಿಎಸ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಮಾರಮ್ಮ ಸರ್ಕಲ್, ಬಿಎಚ್‍ಇಐ ಮೂಲಕ ಯಶವಂತಪುರ ಫ್ಲೈಓವರ್ ಮೇಲೇರಿ ಮೆಟ್ರೋ ಬಳಿ ಬಲ ತಿರುವು ಪಡೆದು ಆರ್ ಎಂಸಿ ಯಾರ್ಡ್ ಪಿಎಸ್ ಮಾರ್ಗವಾಗಿ ಗೊರುಗುಂಟೆಪಾಳ್ಯ ಸಿಗ್ನಲ್ ಬಳಿ ಎಡ ತಿರುವು ಪಡೆದು ಸಿಎಂಟಿಐ ಮಾರ್ಗ ಮೂಲಕ 13 ಕಿ.ಮೀ. ಕ್ರಮಿಸಿ ಕಂಠೀರವ ಸ್ಟುಡಿಯೋವನ್ನು ತಲುಪಿತು.
ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಅಂತ್ಯಕ್ರಿಯೆಯ ವೇಳೆ ಸಿಎಂ ಎಚ್.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಸಾರಾ ಮಹೇಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಜಯಮಾಲಾ, ಕೆ.ಜಿ.ಜಾರ್ಜ್, ಶಾಸಕ ಮುನಿರತ್ನ,
ನಟರಾದ ಕಿಚ್ಚ್ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಚಾಲೆಂಚಿಂಗ್ ಸ್ಟಾರ್ ದರ್ಶನ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ನಟರಾದ ಜಗ್ಗೇಶ್, ಕ್ರೆಜಿಸ್ಟಾರ್ ವಿ.ರವಿಚಂದ್ರನ್, ರಮೇಶ್ ಅರವಿಂದ್, ತೆಲಗು ಚಿತ್ರರಂಗ ಹಿರಿಯ ನಟ, ನಿರ್ದೇಶಕ ಮೋಹನ್ ಬಾಬು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.
https://www.youtube.com/watch?v=SwwphJ1oJuc
https://youtu.be/vpV25SEDROE
https://www.youtube.com/watch?v=ei5fso60PsU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv