ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು (Mahesh Babu) ಕೇವಲ ನಟನೆ ಮಾತ್ರವಲ್ಲದೇ, ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅವರ ಒಡೆತನದ ಎಎಂಬಿ ಸಿನಿಮಾಸ್ ಕೂಡ ಒಂದು. ಹೈದರಾಬಾದ್ ಸೇರಿದಂತೆ ಕೆಲವೆಡೆ ಅತ್ಯುತ್ತಮ ಸಿನಿಮಾ ಅನುಭವ ಪ್ರೇಕ್ಷಕರಿಗೆ ನೀಡುತ್ತಿದೆ. ಎಎಂಬಿ ಸಿನಿಮಾಸ್ (AMB Cinemas) ಮಲ್ಟಿಪ್ಲೆಕ್ಸ್ ಚೈನ್ ಆಗಿದೆ. ಇದೀಗ ಈ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿದೆ. ಇದಕ್ಕೆ ದಿನಾಂಕ ಫಿಕ್ಸ್ ಆಗಿದೆ. ಇದೇ ಜನವರಿ 16 ರಿಂದ ಕಾರ್ಯಾರಂಭವಾಗಲಿದ್ದು, 9 ಸ್ಕ್ರೀನ್‌ಗಳು ಪ್ರಾರಂಭವಾಗಲಿವೆ.

ಅಂದಹಾಗೆ ಎಎಂಬಿ ಸಿನಿಮಾಸ್ ಬೆಂಗಳೂರಿನ (Bengaluru) ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿ ಪ್ರಾರಂಭವಾಗ್ತಿದೆ. ಹೌದು, ಬೆಂಗಳೂರಿನ ಗಾಂಧಿ ನಗರದಲ್ಲಿ ಹಲವು ಚಿತ್ರಮಂದಿರಗಳು ಇದ್ದವು. ಇದರ ಪೈಕಿ ಕಪಾಲಿ ಚಿತ್ರಮಂದಿರ ಕೂಡ ಒಂದಾಗಿತ್ತು. ಇಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಪ್ರದರ್ಶನ ಕಂಡಿದ್ದವು.

ಈಗ ಹೊಸ ಚಿತ್ರಮಂದಿರಕ್ಕೆ (Film Theater) `ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ. ಇದು ಡಿಸೆಂಬರ್‌ನಲ್ಲೇ ಆರಂಭ ಆಗಬೇಕಿತ್ತು. ಆದರೆ, ಒಂದು ತಿಂಗಳು ತಡವಾಗಿದೆ. ಜನವರಿ 16, 2026ರಿಂದ ಪ್ರಾರಂಭವಾಗಲಿದೆ.

ಈ ಥಿಯೇಟರ್ ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಅಟ್ಮೋಸ್ ಚಿತ್ರಮಂದಿರ ಆಗಿರಲಿದೆ. 60 ಅಡಿ ಅಗಲದ 9 ಸ್ಕ್ರೀನ್‌ಗಳು ಇದರಲ್ಲಿ ಇರಲಿವೆ. ಪ್ರತಿ ಸ್ಕ್ರೀನ್‌ನಲ್ಲಿ 600 ಪ್ರೇಕ್ಷಕರು ಒಮ್ಮೆಲೆ ಸಿನಿಮಾ ನೋಡಬಹುದಾಗಿದೆ. ಸ್ಕ್ರೀನ್‌ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟ ಹೊಂದಿರಲಿದೆಯಂತೆ. ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟನಲ್ಲಿ ಬೆಂಗಳೂರಿಗೂ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಕಾಲಿಟ್ಟಿದೆ. ಈಗಾಗಲೇ ಈ ಬಗ್ಗೆ ನಟ ಮಹೇಶ್ ಬಾಬು ಟ್ವೀಟ್ ಕೂಡಾ ಮಾಡಿದ್ದರು.

