ಬೆಂಗಳೂರು: ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ಸಂಸ್ಥೆ ತನ್ನ ಭಾರೀ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವ `ಅಮೆಜಾನ್ ಪ್ರೈಂ ಡೇ’ ಅನ್ನು ಇದೇ ತಿಂಗಳ ಜುಲೈ 16 ರಿಂದ ಪ್ರಾರಂಭಿಸಲಿದೆ.
ಕಳೆದ ವರ್ಷ ಅದ್ಧೂರಿಯಾಗಿ ಯಶಸ್ವಿಗೊಂಡಿದ್ದ `ಅಮೆಜಾನ್ ಪ್ರೈಂ ಡೇ’ ಅನ್ನು ಈ ವರ್ಷವು ಮುಂದುವರಿಸಲು ಸಂಸ್ಥೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ ತಿಂಗಳ 16ನೇ ತಾರೀಖಿನಂದು ಮಾರಾಟ ಮಾಡಲು ತಯಾರಿ ನಡೆಸಿದೆ.
`ಅಮೆಜಾನ್ ಪ್ರೈಂ ಡೇ’ ಕೊಡುಗೆ ಜುಲೈ 16ರ ಮಧ್ಯಾಹ್ನ 1ಕ್ಕೆ ಪ್ರಾರಂಭವಾಗಿ ಜುಲೈ 18ರ ಮಧ್ಯರಾತ್ರಿ 12ರವರೆಗೆ ಜಾರಿಯಲ್ಲಿರುತ್ತದೆ. ಒಟ್ಟು 36 ಗಂಟೆಗಳಲ್ಲಿ ಪ್ರತಿ 6 ಗಂಟೆಗೊಮ್ಮೆ ನೂತನ ಕೊಡುಗೆಗಳನ್ನು ಪರಿಚಯಿಸಲಿದೆ. ಅಲ್ಲದೇ ವಿಶೇಷವಾಗಿ ಎಚ್‍ಡಿಎಫ್‍ಸಿ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಹೆಚ್ಚಿನ ಶೇ. 10ರಷ್ಟು ರಿಯಾಯಿತಿ ನೀಡಲು ಸಿದ್ಧವಾಗಿದೆ. ಈ ಎಲ್ಲಾ ಆಫರ್ ಗಳು ಕೇವಲ `ಅಮೆಜಾನ್ ಪ್ರೈಂ ಮೆಂಬರ್ಸ್’ಗೆ ಮಾತ್ರ ಸೀಮಿತವಾಗಿದೆ.
2018ರ ಪ್ರೈಂ ಡೇ ಅಂಗವಾಗಿ ನೂತನವಾಗಿ 200ಕ್ಕೂ ಹೆಚ್ಚು ಹೊಸ ವಸ್ತುಗಳನ್ನು ಪರಿಚಯಿಸಿ ಮಾರಾಟ ಮಾಡಲು ತಯಾರಾಗಿದೆ. ಹೆಸರಾಂತ ಕಂಪನಿಗಳಾದ ಒನ್ ಪ್ಲಸ್, ಸೆನ್ಹೈಸರ್, ಡಬ್ಲ್ಯೂಡಿ, ಗೋದ್ರೇಜ್, ಕ್ಲೌಡ್ ವಾಕರ್, ಸೀಗೇಟ್, ಸ್ಯಾಮ್‍ಸಂಗ್ ಹಾಗೂ ಹೋಮ್ ಅಂಡ್ ಕಿಚನ್, ಡೈಲಿ ನೀಡ್ಸ್, ಫ್ಯಾಶನ್ ಅಂಡ್ ಲೈಫ್ ಸ್ಟೈಲ್, ಹೆಚ್ಚಿನ ಉತ್ಪನ್ನಗಳಲ್ಲಿ ಭಾರೀ ರೀಯಾಯಿತಿ ನೀಡಲಿದ್ದು. ಪ್ರತಿ ಖರೀದಿಯಲ್ಲಿ ಒನ್ ಪ್ಲಸ್-6 ಸ್ಮಾರ್ಟ್ ಫೋನನ್ನು ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.
ಏನಿದು ಅಮೆಜಾನ್ ಪ್ರೈಂ ಮೆಂಬರ್ಸ್?
ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ ಸೇವೆ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ(ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾಗಳನ್ನು ಸಹ ಪ್ರೈಂ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ನೋಡಬಹುದಾಗಿದೆ. ಈ ಸೇವೆಯನ್ನು ಮೊದಲ ಬಾರಿಗೆ 13ವರ್ಷಗಳ ಹಿಂದೆ ಅಂದರೆ 2005ರ ಜನವರಿ 2ರಂದು ಆರಂಭಿಸಲಾಗಿತ್ತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರನ್ನು ಅಮೆಜಾನ್ ಸಂಸ್ಥೆ ಹೊಂದಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. 999 ರೂ. ನೀಡಿದ್ದಲ್ಲಿ ವರ್ಷ ಕಾಲ ಪ್ರೈಂ ಸೇವೆಗೆ ಸದಸ್ಯರಾಗಬಹುದಾಗಿದೆ. ಸದ್ಯ ಈಗ ತಿಂಗಳಿಗೆ 129 ರೂ., ವರ್ಷಕ್ಕೆ 999 ರೂ. ಪಾವತಿಸಿದರೆ ಅಮೇಜಾನ್ ಪ್ರೈಂ ಮೆಂಬರ್ ಆಗಬಹುದು.