ಕೋಲಾರ: ಅಮೆಜಾನ್ ಕಂಪನಿಯ ಮೂಲಕ ಮೊಬೈಲ್ ಬುಕ್ ಮಾಡಿದರೆ ಸೋಪು, ಪೌಡರ್ ಡಬ್ಬಿ ಪತ್ತೆಯಾಗುತ್ತಿದ್ದ ಪ್ರಕರಣಗಳ ಜಾಲವನ್ನು ಜಿಲ್ಲೆಯ ಮಾಲೂರು ಪೊಲೀಸರು ಭೇದಿಸಿದ್ದಾರೆ.
ಅಮೆಜಾನ್ ಕಂಪನಿ ಉದ್ಯೋಗಿಯೇ ಈ ಕೃತ್ಯ ಎಸಗುತ್ತಿದ್ದು, ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಾಲೂರು ತಾಲೂಕಿನ ನಿದರಮಂಗಲ ಗ್ರಾಮದ ಕೆ.ಸೋಮಶೇಖರ್ ಬಂಧಿತ ಆರೋಪಿ. ಇತನಿಗೆ ಸಹಾಯ ಮಾಡುತ್ತಿದ್ದ ಮತ್ತೋರ್ವ ಉದ್ಯೋಗಿ ಪಾಲಾಕ್ಷ ತಲೆಮರೆಸಿಕೊಂಡಿದ್ದಾನೆ.
Advertisement
Advertisement
ಹೊಸಕೋಟೆ ಬಳಿ ಸೌಖ್ಯ ರಸ್ತೆಯಲ್ಲಿರುವ ಅಮೆಜಾನ್ ಕಂಪನಿಯಲ್ಲಿ ಕೆ.ಸೋಮಶೇಖರ್ ಹಾಗೂ ಪಾಲಾಕ್ಷ ಕೆಲಸಮಾಡುತ್ತಿದ್ದರು. ಆರೋಪಿಗಳು ಅಮೆಜಾನ್ ಕಂಪನಿಯಲ್ಲಿ ಆರ್ಡರ್ ಪಡೆದು ಅದರಲ್ಲಿ ಸೋಪು ಹಾಗೂ ಪೌಡರ್ ಡಬ್ಬ ಇಟ್ಟು ಗ್ರಾಹಕರಿಗೆ ನೀಡಿ ವಂಚನೆ ಮಾಡುತ್ತಿದ್ದರು. ಇಂತಹ ದೂರುಗಳು ಪದೇ ಪದೇ ಕೇಳಿಬರುತ್ತಿದ್ದಂತೆ ಎಚ್ಚೆತ್ತುಕೊಂಡ ಅಮೆಜಾನ್ ಕಂಪನಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು.
Advertisement
Advertisement
ಬಾಕ್ಸ್ ನಲ್ಲಿರುವ ದುಬಾರಿ ಮೊಬೈಲ್‍ಗಳನ್ನು ತೆಗೆದು, ಅದರಲ್ಲಿ ಸೋಪು, ಪೌಡರ್ ಡಬ್ಬಿಗಳನ್ನು ಇಡುತ್ತಿದ್ದರು. ಬಳಿಕ ಕಳ್ಳತನ ಮಾಡಿದ ಮೊಬೈಲ್ ಅನ್ನು ಕೋಲಾರ, ಮಾಲೂರು ಸೇರಿದಂತೆ ವಿವಿಧ ಕಡೆ ಅರ್ಧ ಬೆಲೆಗೆ ಮಾರುತ್ತಿದ್ದರು. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸೋಮಶೇಖರ್ ನನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 46 ವಿವಿಧ ಕಂಪನಿಯ ಸ್ಮಾರ್ಟ್ ಫೋನ್ ಗಳು, ಒಂದು ಟ್ಯಾಬ್ಲೆಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೋರ್ವ ಆರೋಪಿ ಪಾಲಾಕ್ಷ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv