ಪ್ರಶಾಂತ್ ನಿರ್ದೇಶನದ ಅಮವಾಸೆ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿತ್ತು. ಇದು ಹೇಳಿ ಕೇಳಿ ಹೊಸಾ ಅಲೆಯ ಚಿತ್ರಗಳ ಜಮಾನ. ಹುಮ್ಮಸ್ಸಿನ ಹುಡುಗರು ಸದ್ದೇ ಇಲ್ಲದೆ ಎಂಟ್ರಿ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತಾರೆ. ಅಮವಾಸೆಯಲ್ಲೂ ಕೂಡಾ ಇಂಥಾದ್ದೇ ಕಮಾಲ್ ನಡೆದಿರಬಹುದೆಂಬ ನಿರೀಕ್ಷೆ ಹೊತ್ತು ಥೇಟರು ಹೊಕ್ಕವರಿಗೆ ಸಿಕ್ಕಿದ್ದು ನಿರಾಸೆಯ ಅನುಭವ!
ಯಾವ್ಯಾವುದೋ ಕಾರಣಕ್ಕೆ ಸತ್ತು ಹೋದವರು ದೆವ್ವವಾಗೋದು, ಅದಕ್ಕೆ ಕಾರಣರಾದವರನ್ನು ಥರ ಥರದಲ್ಲಿ ಕಾಡೋದು… ಹುಡುಕಿದರೆ ಈ ಥರದ ಕಥೆ ಹೊಂದಿರೋ ಚಿತ್ರಗಳಿಗೆ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಇಂಥವುಗಳಿಗೆ ಹೊಸಾ ಉದಾಹರಣೆಯಂಥಾ, ಹಳೇ ಟ್ರ್ಯಾಕಿನ ಚಿತ್ರವಾಗಿ ಅಮವಾಸೆ ದಾಖಲಾಗಿದೆ.
Advertisement
Advertisement
ಈ ಚಿತ್ರದ್ದು ಸಾಧಾರಣ ಕಥೆ. ನಾಲ್ವರು ಆತ್ಮೀಯ ಸ್ನೇಹಿತರಲ್ಲೊಬ್ಬನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗುತ್ತೆ. ಆಗ ಆತನ ಮುಂದೆ ಸ್ನೇಹ ಅಥವಾ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳುವಂಥಾ ಭಯಾನಕ ಸಂದರ್ಭ ಸೃಷ್ಟಿಯಾಗುತ್ತೆ. ಆತ ಸ್ನೇಹವನ್ನೇ ಆಯ್ದುಕೊಂಡಿದ್ದರ ಫಲವಾಗಿ ಹುಡುಗಿಯ ದುರಂತ ಅಂತ್ಯ. ನಂತರ ಈತನೂ ಆತ್ಮಹತ್ಯೆ ಮಾಡಿಕೊಂಡೇಟಿಗೆ ಕಥೆಗೊಂದು ತಿರುವು. ಅದರಾಚೆಗೆ ಪ್ರೀತಿ ಕೈ ತಪ್ಪಿ ಸತ್ತ ಹುಡುಗಿ ಪ್ರೇತಾತ್ಮವಾಗಿ ಕಾಡುತ್ತಾಳಾ ಎಂಬುದು ಕುತೂಹಲ.
Advertisement
ಆದರೆ ಈ ಚಿತ್ರದುದ್ದಕ್ಕೂ ಅಂಥಾ ಯಾವ ಕುತೂಹಲಕರವಾದ ವಿಚಾರಗಳೂ ಇಲ್ಲ. ನಿರ್ದೇಶಕ ಪ್ರಶಾಂತ್ ಉಲ್ಟಾ ಸ್ಕ್ರೀನ್ ಪ್ಲೇ ಕೂಡಾ ವರ್ಕೌಟ್ ಆಗಿಲ್ಲ. ಇಡೀ ಚಿತ್ರ ಹಾರರ್ ಕಥೆ ಹೊಂದಿದ್ದರೂ ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟಂತಾಗಿದೆ. ಸಿದ್ಧಸೂತ್ರದ ಆಚೀಚೆಗೆ ಕದಲದ ಅಮವಾಸೆಯ ಬೂತಚೇಷ್ಟೆಗಳು ಯಾವ ರೀತಿಯಿಂದಲೂ ಕಾಡೋದಿಲ್ಲ. ಕತೆ ಸಾಧಾರಣವಾದದ್ದೇ ಆದರೂ ಒಂದಷ್ಟುಯ ಶ್ರಮ ವಹಸಿದ್ದರೆ ತಕ್ಕಮಟ್ಟಿಗೆ ಎಫೆಕ್ಟಿವ್ ಆಗಬಹುದಾಗಿದ್ದ ಅವಕಾಶವನ್ನೂ ಕೂಡಾ ನಿರ್ದೇಶಕರು ಕೈ ತಪ್ಪಿಸಿಕೊಂಡಿದ್ದಾರೆ.
Advertisement
ಹೊಸಬರು ಚಿತ್ರ ಮಾಡಿದಾಗ ಒಂದಷ್ಟು ನಿರೀಕ್ಷೆಗಳಿರುತ್ತವೆ. ಹೊಸಾ ಬಗೆಯ ಕಥೆಯೊಂದಿಗೆ ಏನೋ ಮೋಡಿ ಮಾಡಿರುತ್ತಾರೆಂಬ ನಂಬಿಕೆಯೂ ಪ್ರೇಕ್ಷಕರಲ್ಲಿರುತ್ತೆ. ಆದರೆ ಅಮವಾಸೆಯಂಥಾ ಚಿತ್ರಗಳು ಕೊಡಮಾಡೋದು ಅಪಾದಮಸ್ತಕ ನಿರಾಸೆಯನ್ನಷ್ಟೇ. ಇದರ ಪರಿಣಾಮವಾಗಿ ಕೆಲ ಒಳ್ಳೆ ಚಿತ್ರಗಳನ್ನೂ ಸೋಲಿನ ಬಾಧೆ ಆವರಿಸಿಕೊಳ್ಳುವಂತಾಗುತ್ತದೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv