ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಾ ಬಂದಿದ್ದ ಸಿನಿಮಾ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare). ಅರುಣ್ ಅಮುಕ್ತ (Arun Amukta) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಗಾಯಕ ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸಿದ್ದಾರೆ. ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದ್ದ ಈ ಚಿತ್ರವೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಕುಂಬಳ ಕಾಯಿ ಒಡೆದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ಕೆ ಸಜ್ಜುಗೊಂಡಿರುವ ಚಿತ್ರತಂಡ, ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮ ಪ್ರತಿನಿಧಿಗಳನ್ನು ಮುಖಾಮುಖಿಯಾಗಿದ್ದಾರೆ. ಈ ಹಂತದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಭಾಗವಾಗಿರುವ ಕಲಾವಿದರೆಲ್ಲ ಮನದುಂಬಿ ಮಾತಾಡಿದ್ದಾರೆ. ಒಟ್ಟಾರೆ ಅನುಭವಗಳ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Advertisement
ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಐವತ್ತು ದಿನಗಳ ಕಾಲ ಚಿತ್ರೀಕರಣ ನೆರವೇರಿದೆ. ಈ ಬಗೆಗಿನ ಸಾಕಷ್ಟು ಮಾಹಿತಿಗಳನ್ನು ಕಾರ್ಯಕಾರಿ ನಿರ್ಮಾಪಕರಾದ ಶ್ರೀಕಾಂತ್ ಕಶ್ಯಪ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಮೂರು ಯುವ ಜೋಡಿಯ ಸುತ್ತ ಕಥೆ ಚಲಿಸುತ್ತದೆ. ಅದರಲ್ಲೊಂದು ಪಾತ್ರವನ್ನು ಅಮರ್ ನಿಭಾಯಿಸಿದ್ದಾರೆ. ಅಮರ್ ಪಾಲಿಗಿದು ನಟನಾಗಿ ಮೊದಲ ಚಿತ್ರ. ನಿರ್ದೇಶಕ ಅರುಣ್ ಅಮುಕ್ತ ಆಡಿಷನ್ ನಡೆಸಿ, ಒಂದಷ್ಟು ತರಬೇತಿಗಳನ್ನು ನೀಡುವ ಮೂಲಕ ಅಮರ್ ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ.
Advertisement
Advertisement
ಈ ಸಿನಿಮಾ ಮೂಲಕವೇ ತನಗೆ ಸಿನಿಮಾ ರಂಗಪ್ರವೇಶದ ಅವಕಾಶ ಕಲ್ಪಿಸಿದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಅಮರ್ (Amar) ಧನ್ಯವಾದ ಹೇಳಿದ್ದಾರೆ. ಜೊತೆಗೆ ಚಂದನ್ ಶೆಟ್ಟಿ ಜೊತೆ ನಟಿಸುವ ಅವಕಾಶ ಸಿಕ್ಕಿದ್ದರ ಬಗ್ಗೆ ತಮ್ಮೊಳಗಿನ ಥ್ರಿಲ್ ಅನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಒಟ್ಟಾರೆಯಾಗಿ, ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಮೂಲಕ ನಾಯಕನಾಗಿರುವ ಅಮರ್ ಅಕ್ಷರಶಃ ರೋಮಾಂಚಿತರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಬಹುದಾದ ಟ್ರೈಲರ್ ಮೂಲಕ ಅಮರ್ ಸೇರಿದಂತೆ ಎಲ್ಲರ ಪಾತ್ರಗಳೂ ಪ್ರೇಕ್ಷಕರನ್ನು ಮುಖಾಮುಖಿಯಾಗಲಿವೆ.
Advertisement
ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.