ನವದೆಹಲಿ: ಅಮರನಾಥ ಯಾತ್ರೆ ಪುನಾರಂಭಿಸಲಾಗಿದೆ. ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದು, ಇದೀಗ ಹವಾಮಾನ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಯಾತ್ರೆ ಮತ್ತೆ ಆರಂಭಿಸಲಾಗಿದೆ. ಜಮ್ಮು ಮಾರ್ಗವಾಗಿ ಬರುವ ಯಾತ್ರಾರ್ಥಿಗಳಿಗೆ ಬೇಸ್ ಕ್ಯಾಂಪ್‍ಗೆ ತೆರಳಲು ಅನುಮತಿ ನೀಡಲಾಗಿದೆ. ಪೆಹಲ್ಗಾಮ್ ಬೇಸ್ ಮಾರ್ಗವಾಗಿ ತೆರಳಲು ಅವಕಾಶ ನೀಡಲಾಗಿದೆ.
ಮುಂಜಾನೆ 5 ಗಂಟೆಗೆ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಯಾತ್ರಾರ್ಥಿಗಳು ಹೊರಟಿದ್ದಾರೆ. ಬಾಲ್ಟಾಲ್ ಮತ್ತು ನುನ್ವಾನ್ ನಿಂದ ಹೆಲಿಕಾಪ್ಟರ್ ಹಾರಾಟ ಆರಂಭವಾಗಿದೆ. ಭಾನುವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸಭೆಯಲ್ಲಿ ಇಂದು ಹವಾಮಾನ ಪರಿಸ್ಥಿತಿ ಆಧರಿಸಿ ಅಧಿಕಾರಿಗಳು ತೀರ್ಮಾನ ಮಾಡುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ವಿಸ್ತರಣೆ – ನೆರೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿ
ಅಮರನಾಥ ಯಾತ್ರೆ ಪುನಾರಂಭಕ್ಕೆ ಜಿಲ್ಲಾಡಳಿತ ಕೂಡ ಉತ್ಸುಕವಾಗಿತ್ತು. ಗುಹೆ ದರ್ಶನಕ್ಕೆ ಸಾವಿರಾರು ಜನರು ಕಾಯುತ್ತಿರುವ ಹಿನ್ನೆಲೆ ಅವಕಾಶ ನೀಡಲು ಚಿಂತನೆ ನಡೆಸಲಾಗಿತ್ತು. ಅಲ್ಲದೆ ಮೇಘಸ್ಫೋಟದಿಂದ ಹಾಳಾದ ರಸ್ತೆಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಿತ್ತು. ದರ್ಶನಕ್ಕೆ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ನಿನ್ನೆ ಲೆಫ್ಟಿನೆಂಟ್ ಗವರ್ನರ್ ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಇಂದು ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಇತ್ತ ಅಮರನಾಥ ಗುಹೆಯ ಬಳಿ ಮೇಘಸ್ಫೋಟ ಆಗಿ ನಾಪತ್ತೆಯಾದ 40 ಮಂದಿ ಬದುಕಿರುವುದು ಅನುಮಾನವಾಗಿದೆ. ಮೂರು ದಿನದ ಕಾರ್ಯಾಚರಣೆಯ ಬಳಿಕ ಯಾತ್ರಾರ್ಥಿಗಳು ಪತ್ತೆಯಾಗಿಲ್ಲ. ಹೀಗಾಗಿ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ರಕ್ಷಣಾ ತಂಡಗಳು ಅನುಮಾನ ವ್ಯಕ್ತಪಡಿಸಿವೆ. ಆದರೂ ಭದ್ರತಾ ಸಿಬ್ಬಂದಿ ಸಾಧ್ಯವಾದಷ್ಟು ಜನರನ್ನು ಜೀವಂತವಾಗಿ ಹುಡುಕುವ ಪ್ರಯತ್ನದಲ್ಲಿದ್ದಾರೆ. ಸ್ನಿಫರ್ ಡಾಗ್‍ಗಳು, ಥರ್ಮಲ್ ಇಮೇಜರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸುತ್ತಿದ್ದಾರೆ.
ಅಮರನಾಥ ಗುಹೆ ಬಳಿ ಮೇಘಸ್ಫೋಟಕ್ಕೂ ಮುನ್ನ ಒಂದು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ದರ್ಶನ ಪಡೆದಿದ್ದರು. ಯಾತ್ರೆ ಶುರುವಾದ ಮೊದಲ ವಾರದಲ್ಲಿ ಒಂದು ಲಕ್ಷ ಮಂದಿ ದರ್ಶನ ಪಡೆದಿದ್ದರು. ಮೇಘಸ್ಫೋಟಕ್ಕೂ ಮುನ್ನ 10 ಬ್ಯಾಚ್‍ಗಳಲ್ಲಿ ಒಟ್ಟು 69,535 ಯಾತ್ರಾರ್ಥಿಗಳು ನುನ್ವಾನ್, ಪಹಲ್ಗಾಮ್, ಬಲ್ಟಾಲ್ ಮೂಲಕ ಭೇಟಿ ನೀಡಿದ್ದರು.