ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಾರೀ ಮಳೆಯಿಂದಾಗಿ (Rain) ಅಮರನಾಥ ಯಾತ್ರೆಗೆ (Amarnath Yatra) ತೆರಳುವ ಮಾರ್ಗದಲ್ಲಿ (Landslide) ಭೂಕುಸಿತವಾಗುತ್ತಿದೆ. ಇದರಿಂದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಗಂಡೇರ್ಬಾಲ್ ಜಿಲ್ಲೆಯ ಬಾಲ್ಟಾಲ್ ಯಾತ್ರೆಯ ಬಾಲ್ಟಾಲ್ ಮಾರ್ಗದಲ್ಲಿ ನೀರಿನ ಜೊತೆ ಕಲ್ಲು ಬಂಡೆಗಳು ಉರುಳಿ ಬಂದಿದ್ದರಿಂದ ಮಹಿಳೆಯೊಬ್ಬಳು ಸಿಲುಕಿ ಸಾವನ್ನಪ್ಪಿದ್ದಾಳೆ. ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ – ಹೆಜ್ಜೆ ಹೆಜ್ಜೆಗೂ ಪೊಲೀಸರ ನಿಗಾ
ಬಾಲ್ಟಾಲ್ ಮಾರ್ಗದಲ್ಲಿ ಭೂಕುಸಿತವಾಗಿದೆ. ಭೂಕುಸಿತದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ಇಬ್ಬರು ಯಾತ್ರಿಗಳು ಸಿಲುಕಿರುವುದು ಸೆರೆಯಾಗಿದೆ. ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅಪಾಯದಿಂದ ತಪ್ಪಿಸಿಕೊಳ್ಳಲು ಅನೇಕ ಜನರು ಮಾರ್ಗದಲ್ಲಿ ಅಳವಡಿಸಲಾದ ರೇಲಿಂಗ್‌ಗಳನ್ನು ಹಿಡಿದುಕೊಂಡಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.
ಸ್ಥಳದಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿರುವ ಯಾತ್ರಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಯಾತ್ರೆಯ ಮಾರ್ಗಗಳ ದುರಸ್ಥಿ ಕಾರ್ಯ ಮುಗಿಯುವವರೆಗೂ ಯಾತ್ರೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥನ ದರ್ಶನ ಪಡೆದಿದ್ದಾರೆ. ಜು.3 ರಂದು ಆರಂಭಗೊಂಡಿದ್ದ ಯಾತ್ರೆ ಆಗಸ್ಟ್ 9 ರಂದು ಕೊನೆಗೊಳ್ಳಲಿದೆ. ಇದನ್ನೂ ಓದಿ: ಅಮರನಾಥ ಯಾತ್ರೆ – ಯಾತ್ರಿಕರ ಸುರಕ್ಷತೆಗೆ ಗಸ್ತು ಹೆಚ್ಚಿಸಿದ ಸಿಆರ್‌ಪಿಎಫ್