ಶ್ರೀನಗರ: ಉಗ್ರರ ಪೈಶಾಚಿಕ ಕೃತ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಶಿವಭಕ್ತರಲ್ಲಿ 7 ಮಂದಿ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಆದ್ರೆ ಹೀರೋ ರೀತಿಯಲ್ಲಿ ಉಳಿದ ಯಾತ್ರಿಕರ ಪ್ರಾಣ ಉಳಿಸಿದ್ದು ಬಸ್ ಚಾಲಕ ಸಲೀಮ್.
ಅದು ಸೋಮವಾರ ರಾತ್ರಿ 8.20ರ ಸಮಯ. ಬಿಳಿ ಬಣ್ಣದ ಗುಜರಾತ್ ನೋಂದಣಿಯುಳ್ಳ ಬಸ್ 61 ಅಮರನಾಥ ಯಾತ್ರಿಕರನ್ನ ಶ್ರೀನಗರದಿಂದ ಜಮ್ಮುವಿಗೆ ಕೊಂಡೊಯ್ಯುತ್ತಿತ್ತು. ಆ ಬಸ್ ಅಧಿಕೃತವಾಗಿ ಅಮರನಾಥ ದೇವಾಲಯದ ಬೋರ್ಡ್‍ನೊಂದಿಗೆ ನೋಂಣಿಯಾಗಿರಲಿಲ್ಲ. ಹೀಗಾಗಿ ಆ ಬಸ್‍ಗೆ ಪೊಲೀಸರ ರಕ್ಷಣೆಯೂ ಇರಲಿಲ್ಲ. ಬಸ್ ಖನಾಬಲ್ ಬಳಿ ತಲುಪುತ್ತಿದ್ದಂತೆ 3-5 ಉಗ್ರರು ಗುಂಡಿನ ದಾಳಿ ಆರಂಭಿಸಿದ್ರು. ಹೊರಗೆ ಕಗ್ಗತ್ತಲು, ಬಸ್ ಮೇಲೆ ಗುಂಡಿನ ಸುರಿಮಳೆ. ಎಂಥವರಿಗೂ ಭಯ ಹುಟ್ಟಿಸುವ ಸಂದರ್ಭವದು. ಆದ್ರೆ ಬಸ್‍ನ ಚಾಲಕ ಸಲೀಮ್ ಶೇಕ್ ಮಾತ್ರ ಬಸ್ ನಿಲ್ಲಿಸದೇ ಮುಂದೆ ಸಾಗಿದ್ದರು. 7 ಯಾತ್ರಿಕರನ್ನ ಅವರಿಂದ ಉಳಿಸಲಾಗಲಿಲ್ಲ. ಆದ್ರೂ ಉಳಿದ ಎಲ್ಲರನ್ನೂ ಸುರಕ್ಷಿತವಾಗಿ ಕರೆದುಕೊಂಡು ಬಂದು ಅವರ ಪ್ರಾಣ ಉಳಿಸಿದ್ರು ಆ ಹೀರೋ ಚಾಲಕ.
God gave me strength to keep moving, and I just did not stop: Salim,Driver of the bus pic.twitter.com/3jm1LQUYLU
— ANI (@ANI) July 11, 2017
ಬಸ್‍ನೊಳಗಿದ್ದ ಯಾತ್ರಿಕ ಯೋಗೇಶ್ ಪ್ರಜಾಪತಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ನಾವು ಸೀಟ್‍ನ ಕೆಳಗಡೆ ಅಡಗಿ ಕುಳಿತೆವು. ಎಲ್ಲಾ ದಿಕ್ಕುಗಳಿಂದ ಬುಲೆಟ್‍ಗಳು ಹಾರಿ ಬಂದವು. ಆದ್ರೆ ಚಾಲಕ ಮಾತ್ರ ಗಾಬರಿಯಾಗಲಿಲ್ಲ. ಅವರು ಬಸ್ ಚಾಲನೆ ಮಡುವುದನ್ನ ಮುಂದುವರೆಸಿದ್ರು ಎಂದಿದ್ದಾರೆ.
ಇಲ್ಲಿಂದ ಮುಂದೆ ಸಾಗಿದ ನಂತರ ಸಲೀಮ್ ಅವರು ಒಂದು ಕಿಲೋಮೀಟರ್‍ವರೆಗೆ ಬಸ್ ಚಾಲನೆ ಮಾಡಿಕೊಂಡು ಹೋಗಿ ನಂತರವಷ್ಟೆ ಬಸ್ ನಿಲ್ಲಿಸಿದ್ರು. ಒಂದು ವೇಳೆ ಚಾಲಕ ಭಯದಿಂದ ಬಸ್ ನಿಲ್ಲಿಸಿದ್ರೆ ಮತ್ತಷ್ಟು ಜನ ಪ್ರಾಣ ಕಳೆದುಕೊಳ್ಳಬೇಕಿತ್ತು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಚಾಲಕ ಸಲೀಮ್ ಅವರ ಧೈರ್ಯವನ್ನ ಮೆಚ್ಚಿ ಕೊಂಡಾಡಿದ್ದಾರೆ. 50ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಕ್ಕೆ ಅವರನ್ನ ಶ್ಲಾಘಿಸಿದ್ದಾರೆ.
ಜನರ ಪ್ರಣ ಉಳಿಸಿದ್ದಕ್ಕೆ ಬಸ್ ಚಾಲಕನಿಗೆ ಧನ್ಯವಾದ ಹೇಳಬೇಕು. ಅವರ ಹೆಸರನ್ನ ಶೌರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತೇವೆ ಎಂದು ರೂಪಾನಿ ವರದಿಗಾರರಿಗೆ ಹೇಳಿದ್ದಾರೆ.
ಈ ದುರಂತದಲ್ಲಿ ಸಾವನ್ನಪ್ಪಿದ 7 ಜನರಲ್ಲಿ 5 ಮಂದಿ ಗುಜರಾತ್‍ನವರು, ಇಬ್ಬರು ಮಹಾರಾಷ್ಟ್ರದವರು. ಮೂಲಗಳ ಪ್ರಕಾರ ಪಾಕಿಸ್ತಾನದ ಲಷ್ಕರ್ ಸಂಘಟನೆಯ ಇಸ್ಮಾಯಿಲ್ ಎಂಬಾತ ಈ ದಾಳಿಯ ನೇತೃತ್ವ ವಹಿಸಿದ್ದ ಎಂದು ವರದಿಯಾಗಿದೆ.