– ಉತ್ತರಪ್ರದೇಶ ಸಿಎಂ ಆಯ್ಕೆ ಇನ್ನೂ ವಿಳಂಬ
ನವದೆಹಲಿ: 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಆಸರೆಯಂತಿರುವ ಪಂಜಾಬ್‍ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ರಾಜಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಬಡ್ನೋರ್ ಪ್ರಮಾಣವಚನ ಬೋಧಿಸಲಿದ್ದಾರೆ. ನವಜೋತ್ ಸಿಂಗ್ ಸಿಧು, ಮನ್‍ಪ್ರೀತ್ ಸಿಂಗ್ ಬಾದಲ್ ಸೇರಿ ಒಟ್ಟು 9 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 77 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ 20, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ 15 ಶಾಸಕರನ್ನು ಹೊಂದಿದೆ.
Advertisement
ಮಂಗಳವಾರವಷ್ಟೇ ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹಣೆಬರಹ ಇವತ್ತು ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಇಂದು ಬಹುಮತ ಸಾಬೀತುಪಡಿಸಬೇಕಿದೆ. 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾವರ್ಡ್(ಜಿಎಫ್‍ಪಿ) ಪಾರ್ಟಿ ತಲಾ ಮೂವರು ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಮತ್ತು ಓರ್ವ ಎನ್‍ಸಿಪಿ ಶಾಸಕರಿದ್ದಾರೆ. ಇವರಲ್ಲಿ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದ್ದಾರೆ. ಅಲ್ಲಿಗೆ ಅಗತ್ಯ ಸರಳ ಬಹುಮತದ ಸಂಖ್ಯೆ 21ನ್ನು ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 8 ಮಂದಿ ಸಚಿವರಲ್ಲಿ ಎಂಜಿಪಿಯ ಇಬ್ಬರು, ಜಿಎಫ್‍ಪಿಯ ಮೂವರು ಮತ್ತು ಸ್ವತಂತ್ರ ಶಾಸಕರು ಸೇರಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುವ ಕಸರತ್ತನ್ನು ಬಿಜೆಪಿ ಮಾಡಿಕೊಂಡಿದೆ.
Advertisement
ಈ ನಡುವೆ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ವಿರುದ್ಧ ದೂರಿದ್ದ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಬಿಜೆಪಿಗೆ ಸೂಚಿಸಿತ್ತು.
Advertisement
ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಆದ್ರೆ ಕಂಡುಕೇಳರಿಯದ ಜಯದ ಬಳಿಕವೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬವಾಗಿದೆ. ನಾಲ್ಕು ದಶಕಗಳ ಬಳಿಕ ಸಿಕ್ಕಿರುವ ಪ್ರಚಂಡ ಬಹುಮತದ ಹಿನ್ನೆಲೆಯಲ್ಲಿ ಸರ್ವ ಸಮುದಾಯಗಳನ್ನು ಓಲೈಸಬಲ್ಲ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಹೊಣೆ ಹೊತ್ತಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭೂಪೇಂದರ್ ಯಾದವ್ ಶನಿವಾರದಷ್ಟೊತ್ತಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
Advertisement
ರಾಜ್ಯದಲ್ಲಿ ಕಟ್ಟಕಡೆಯ ಬಿಜೆಪಿ ಸಿಎಂ ಆಗಿರುವ ರಾಜನಾಥ್ ಸಿಂಗ್‍ರ ಹೆಸರು ಮುಂಚೂಣಿಯಲ್ಲಿದೆಯಾದರೂ ಅದರ ಬಗ್ಗೆ ಚರ್ಚೆಯೇ ಅಪ್ರಯೋಜಕ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರಿತ ಚರ್ಚೆ ನಡೆಸದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಚಂಡ ಫಲಿತಾಂಶದ ನಂತರ ರಾಜ್ಯಕ್ಕೆ ಪ್ರಧಾನಿ ನೀಡುತ್ತಿರುವ ಮೊಟ್ಟ ಮೊದಲ ಭೇಟಿ ಇದಾಗಲಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‍ನಲ್ಲೂ ಅದ್ಭುತ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ.