ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕಾಂಗ್ರೆಸ್ ತೊರೆದಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದರೆ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಸಿಂಗ್ ಹೇಳಿದ್ದರು. ಅಂತೆಯೇ ಈಗ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಈಗಾಗಲೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಶನಿವಾರದಂದು ಬಿಜೆಪಿ ರಾಷ್ಟ್ರಾಧ್ಯಾಕ್ಷರನ್ನು ಭೇಟಿಯಾಗಲಿದ್ದೇನೆ ಎಂದು ಮಾಜಿ ಸಿಎಂ ಅಮರೀಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ
ಕಾಂಗ್ರೆಸ್‌ನ ಯಾವುದೇ ಶಾಸಕರು ತನ್ನ ಬೆಂಬಲಕ್ಕೆ ನಿಂತಿಲ್ಲ ಎಂಬ ಮಾತುಗಳನ್ನು ಅಮರೀಂದರ್ ಸಿಂಗ್ ತಳ್ಳಿಹಾಕಿದ್ದಾರೆ. ಕಾಂಗ್ರೆಸ್‌ನ ಅನೇಕ ಶಾಸಕರು ತಮ್ಮೊಂದಿಗೆ ಸೇರಲು ಉತ್ಸುಕರಾಗಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ಕಾಯುತ್ತಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಆದ ಅವಕಾಶಗಳಿಗೂ ಅಮರೀಂದರ್ ಹಾನಿಮಾಡಿಕೊಳ್ಳುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಹೇಳಿದ್ದರು. ಅವರ ಹೇಳಿಕೆಯನ್ನೂ ಅಮರೀಂದರ್ ಅವರು ನಿರಾಕರಿಸಿದ್ದಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲಾ ಕಡೆ ಬಿಜೆಪಿ ಕಡೆಗಿನ ಒಲವು ಹೆಚ್ಚಾಗಿದೆ. ಮೈತ್ರಿ ಆಗುವುದರಿಂದ ಅನೇಕ ಹಿಂದೂಗಳು ಬಿಜೆಪಿ ಮತ್ತು ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ. ಪಂಜಾಬ್‌ನಲ್ಲಿ ಶೇ. 36ರಷ್ಟು ಹಿಂದೂಗಳಿದ್ದು, ರೈತರ ಬೆಂಬಲವೂ ನಮಗೆ ಸಿಗಲಿದೆ. ಹೀಗಾಗಿ ನಾವು ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಎಂಬ ಆಶಯವನ್ನು ಅಮರೀಂದರ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೀನಾ ಮೇಲೆ ಕಣ್ಣಿಡಲು ಬಂತು ಇಸ್ರೇಲ್ ಡ್ರೋನ್
ಎಷ್ಟು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ಅಮರೀಂದರ್ ಸಿಂಗ್ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಈಗಾಗಲೇ ನಮ್ಮ ಬಳಿ 30-40 ಅರ್ಜಿದಾರರಿದ್ದಾರೆ. ಆದರೆ ಎಷ್ಟು ಶಾಸಕರು, ಸಂಸದರು ನಮ್ಮೊಂದಿಗಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬ ಹೇಳಿದ್ದಾರೆ.