– ಭವಿಷ್ಯದ ಅಮರಾವತಿ ಹೇಗಿರಲಿದೆ?, ಈಗ ಹೇಗಿದೆ..?
ಇಬ್ಬರು ರಾಜಕೀಯ ದೈತ್ಯರು ರೆಡ್ಡಿ ಮತ್ತು ನಾಯ್ಡು ನಡುವಿನ ಯುದ್ಧದಲ್ಲಿ ಸಿಲುಕಿದ ನಗರವು ಅಂತಿಮವಾಗಿ ಬೂದಿಯಿಂದ ಮೇಲೇರಬಹುದು. ನಾಯ್ಡು ಅವರು ಈಗ ಕೇಂದ್ರದಲ್ಲಿ ಪ್ರಮುಖ ಮಿತ್ರರಾಗಿದ್ದಾರೆ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ಅಮರಾವತಿಯ ಭವಿಷ್ಯದ ಕೀಲಿಯನ್ನು ಅವರು ಹೊಂದಿದ್ದಾರೆ.
ಹೌದು. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು (N Chandrababu Naidu) ಅವರು ತಮ್ಮ ಅಮರಾವತಿಯ ದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದಾರೆ. ಈ ಮೂಲಕ ನಗರದ ನಿವಾಸಿಗಳು ಮತ್ತು ಹೂಡಿಕೆದಾರರಲ್ಲಿ ಭರವಸೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಇದಕ್ಕೆ ಕಾರಣ ಕೆಲ ದಿನಗಳ ಹಿಂದೆಯಷ್ಟೇ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಎಂದು ಘೋಷಿಸಿದ್ದಾರೆ.
Advertisement
ಈ ಹಿಂದೆ ಜಗನ್ ಮೋಹನ್ ರೆಡ್ಡಿ (Jagan Mohan Reddy) ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರು. ಈಗ ಆಂಧ್ರಪ್ರದೇಶದಲ್ಲಿ ಎನ್ ಡಿ ಎ ಒಕ್ಕೂಟದ ಸರ್ಕಾರ ಅಧಿಕಾರ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದ ಮೂರು ರಾಜಧಾನಿಗಳ ನಿರ್ಧಾರವನ್ನು ರದ್ದುಗೊಳಿಸಿ ಅಮರಾವತಿಯೊಂದೇ ರಾಜಧಾನಿಯಾಗಲಿದೆ ಎಂದು ನಾಯ್ಡು ತಿಳಿಸಿದ್ದಾರೆ. ಇನ್ಮುಂದೆ ಮೂರು ರಾಜಧಾನಿ ಎಂಬುದು ಇರಲ್ಲ. ಅಮರಾವತಿ ರಾಜಧಾನಿಯಾಗಲಿದೆ. ವಿಶಾಖಪಟ್ಟಣವನ್ನು ಆರ್ಥಿಕ ಮತ್ತು ಆಧುನಿಕ ರಾಜಧಾನಿಯನ್ನಾಗಿ ಮಾಡೋಣ ಎಂದು ಹೇಳಿದ್ದಾರೆ. ಅಮರಾವತಿಯನ್ನು ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಕಾರಿ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಎಂದು ಹಿಂದಿನ ವೈಎಸ್ಆರ್ಸಿಪಿ (YSRCP) ಸರ್ಕಾರ ಪರಿಕಲ್ಪನೆ ಹೊಂದಿತ್ತು.
Advertisement
Advertisement
ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಂಧ್ರಪ್ರದೇಶದ 175 ವಿಧಾನಸಭಾ ಸ್ಥಾನಗಳ ಪೈಕಿ ಎನ್‌ಡಿಎ 164 ಸ್ಥಾನಗಳನ್ನು ಗೆದ್ದಿದೆ. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ 11 ಸ್ಥಾನಗಳಿಗೆ ಕುಸಿದಿದೆ. ಹೀಗಾಗಿ ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಅಮರಾವತಿಯನ್ನು ಹೊಸ ರಾಜಧಾನಿ ಮಾಡುವ ಪ್ರಯತ್ನಗಳು ತೀವ್ರಗೊಂಡಿವೆ.
Advertisement
ನಾಯ್ಡು ಅವರು ತಮ್ಮ ಹಿಂದಿನ ಸರ್ಕಾರದಲ್ಲಿ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು ಪ್ರಸ್ತಾಪಿಸಿದ್ದರು. ಇದರ ಕೆಲಸವೂ ನಡೆಯುತ್ತಿತ್ತು. ಆದರೆ 2019 ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಸೋತ ಬಳಿಕ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. 2019ರಲ್ಲಿ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದಾಗ ಮೂರು ರಾಜಧಾನಿಗಳನ್ನು ರಚಿಸಲು ಮುಂದಾಗಿದ್ದರು. ರೆಡ್ಡಿ ಆಂಧ್ರದ ವಿಶಾಖಪಟ್ಟಣಂ, ಅಮರಾವತಿ ಮತ್ತು ಕರ್ನೂಲ್ ಈ ಮೂರು ರಾಜಧಾನಿಗಳನ್ನು ಮಾಡಲು ಪ್ರಸ್ತಾಪಿಸಿದ್ದರು.
ಎಲ್ಲಿದೆ ಅಮರಾವತಿ?: ಆಂಧ್ರ ಪ್ರದೇಶದ (Andhrapradesh) ಗುಂಟೂರು ಜಿಲ್ಲೆಯ ಕೃಷ್ಣಾ ನದಿಯ ದಡದಲ್ಲಿ ಅಮಾರವತಿ ನಗರವಿದೆ. ಆದರೆ ರಾಜಧಾನಿ ಪ್ರದೇಶ ವ್ಯಾಪ್ತಿಯು ಗುಂಟೂರು ಮತ್ತು ವಿಜಯವಾಡ ಜಿಲ್ಲೆಯ 29 ಹಳ್ಳಿಗಳನ್ನು ಒಳಗೊಂಡಿದೆ.
ಶಿವನ ದೇವಾಲಯವಾಗಿರುವ ಅಮರೇಶ್ವರ ದೇವಾಲಯದ ನಂತರ ಅಮರಾವತಿ ಎಂದು ಹೆಸರಿಸಲಾಗಿದೆ. ಇದನ್ನು ಎರಡನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.ಇದು ಒಂದು ಕಾಲದಲ್ಲಿ ಶಾತವಾಹನ ಮತ್ತು ಪಲ್ಲವ ರಾಜರ ರಾಜಧಾನಿಯಾಗಿತ್ತು. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ಇಲ್ಲಿ ಸ್ತೂಪ ಮತ್ತು ಮಠವನ್ನು ನಿರ್ಮಿಸಲಾಯಿತು.
ಅಮರಾವತಿ ಮಾತ್ರ ಏಕೆ?: 2014ರಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ (Telangana) ಹೊಸ ರಾಜ್ಯವಾಯಿತು. 10 ವರ್ಷಗಳ ಕಾಲ ತೆಲಂಗಾಣ ಮತ್ತು ಆಂಧ್ರದ ರಾಜಧಾನಿ ಹೈದರಾಬಾದ್ ಆಗಿತ್ತು. 2024 ಜೂನ್ 2 ರಂದು 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಹೈದರಾಬಾದ್ ಈಗ ತೆಲಂಗಾಣದ ರಾಜಧಾನಿಯಾಗಿದೆ.
ಹತ್ತು ವರ್ಷಗಳ ಹಿಂದೆ ವಿಭಜನೆಯಾದಾಗ, ಹೈದರಾಬಾದ್ ಶಾಶ್ವತವಾಗಿ ತೆಲಂಗಾಣ ರಾಜಧಾನಿಯಾಗಿ ಉಳಿಯುತ್ತದೆ ಮತ್ತು ಆಂಧ್ರಕ್ಕೆ ಹೊಸ ರಾಜಧಾನಿಯನ್ನು ಮಾಡಬೇಕೆಂದು ನಿರ್ಧರಿಸಲಾಯಿತು. ಅಂತೆಯೇ 2014ರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚಂದ್ರಬಾಬು ನಾಯ್ಡು ಅವರು ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಿದರು. 2015 ರ ಅಕ್ಟೋಬರ್ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮರಾವತಿಯಲ್ಲಿ ಹೊಸ ರಾಜಧಾನಿಗೆ ಅಡಿಪಾಯ ಹಾಕಿದರು. ಇಷ್ಟೇ ಅಲ್ಲ ನಾಯ್ಡು ಸರ್ಕಾರ ಹೊಸ ರಾಜಧಾನಿ ನಿರ್ಮಿಸಲು ರೈತರಿಂದ 33 ಸಾವಿರ ಎಕರೆ ಭೂಮಿಯನ್ನು ಕೂಡ ಸ್ವಾಧೀನಪಡಿಸಿಕೊಂಡಿತ್ತು.
ಮಾಸ್ಟರ್ ಪ್ಲಾನ್ ಪ್ರಕಾರ, ಅಮರಾವತಿಯನ್ನು ಆಂಧ್ರದ ಹೊಸ ರಾಜಧಾನಿಯಾಗಿ ಆಯ್ಕೆ ಮಾಡಲಾಗಿದೆ. ಏಕೆಂದರೆ ಇದು ರಾಜ್ಯದ ಎರಡು ಪ್ರಮುಖ ನಗರ ಕೇಂದ್ರಗಳಾದ ವಿಜಯವಾಡ ಮತ್ತು ಗುಂಟೂರಿನ ನಡುವೆ ಇದೆ. ಆಂಧ್ರ ಸರ್ಕಾರವು ಅಮರಾವತಿ ಸುತ್ತಲಿನ ಎಂಟೂವರೆ ಸಾವಿರ ಚದರ ಕಿಲೋಮೀಟರ್ ಪ್ರದೇಶವನ್ನು ರಾಜಧಾನಿ ಪ್ರದೇಶವನ್ನಾಗಿ ಮಾಡಲಿದೆ. ವಿಜಯವಾಡ ಮತ್ತು ಗುಂಟೂರು ಕೂಡ ಈ ವ್ಯಾಪ್ತಿಗೆ ಬರಲಿವೆ.
ರಾಜಧಾನಿ ಅಮರಾವತಿ ಹೇಗಿರಲಿದೆ?: ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (CRDA) ಮಾಸ್ಟರ್ ಪ್ಲಾನ್ ಪ್ರಕಾರ, ರಾಜಧಾನಿಯನ್ನು 217 ಚದರ ಕಿಲೋಮೀಟರ್ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಮರಾವತಿಯನ್ನು ವಿಶ್ವದರ್ಜೆಯ ನಗರವನ್ನಾಗಿ ರೂಪಿಸಿ ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲಾಗುವುದು. ಕೋರ್ ಕ್ಯಾಪಿಟಲ್ ಪ್ರದೇಶವು ಸರ್ಕಾರಿ ಕಚೇರಿಗಳು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹೊಂದಿರುತ್ತದೆ.
ರಾಜಧಾನಿಯ ಎಲ್ಲಾ ವಸತಿ ಪ್ರದೇಶಗಳು, ವಾಣಿಜ್ಯ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು ಮತ್ತು ವ್ಯಾಪಾರ ಕೇಂದ್ರಗಳು ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆಯಿಂದ ಸಂಪರ್ಕಗೊಳ್ಳುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗುವುದು. 2050ರ ವೇಳೆಗೆ ಅಮರಾವತಿಯ ಜನಸಂಖ್ಯೆ 35 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡುವುದರಿಂದ 15 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ರಾಜಧಾನಿ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತದೆ?: 2015ರಲ್ಲಿ ನಾಯ್ಡು ಅವರು ಕೃಷ್ಣಾ ನದಿಯ ದಡದಲ್ಲಿರುವ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡುವುದಾಗಿ ಘೋಷಿಸಿದ್ದರು. 2016 ರಲ್ಲಿ ನಾಯ್ಡು ಅವರು ಅಮರಾವತಿಯಲ್ಲಿ 9 ಥೀಮ್ ಸಿಟಿಗಳು ಮತ್ತು 27 ಟೌನ್‌ಶಿಪ್‌ಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. 2019 ರ ಸ್ಥಿತಿ ವರದಿಯ ಪ್ರಕಾರ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು ಮುಂದಿನ 20 ವರ್ಷಗಳಲ್ಲಿ 1.09 ಲಕ್ಷ ಕೋಟಿ ರೂ. ಬೇಕಾಗಬಹುದು.
ಹೊಸ ಅಂದಾಜು ಪ್ರಕಾರ, 40ರಿಂದ 50 ಸಾವಿರ ಕೋಟಿ ರೂ.ಬೇಕಾಗುತ್ತದೆ. ನಗರದ ನಾನಾ ಮೂಲ ಸೌಕರ್ಯ ಹಾಗೂ ಹಲವು ಸರಕಾರಿ ಕಟ್ಟಡಗಳ ನಿರ್ಮಾಣ ಅಗತ್ಯವಿದೆ. ಆರಂಭದಲ್ಲಿ ನಗರ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂ. ಬೇಕಾಗಬಹುದು ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್‌ಡಿಎ) ಅಂದಾಜಿಸಿತ್ತು.
ಈಗ ಹೇಗಿದೆ ಅಮರಾವತಿ..?: ಭವಿಷ್ಯದ ನಗರ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಅಮರಾವತಿಯ ಭವಿಷ್ಯ ಕಳೆದ 5 ವರ್ಷದಿಂದ ಕತ್ತಲೆಯಲ್ಲಿತ್ತು. ಅರ್ಧಂಬರ್ಧ ನಿರ್ಮಾಣಗೊಂಡ ಬಿಲ್ಡಿಂಗ್‌ಗಳು, ಖಾಲಿ ಸೈಟ್‌ಗಳು, ಖಾಲಿ ಜಮೀನುಗಳು.. ಇದು ಅಮರಾವತಿಯ ಸದ್ಯದ ಪರಿಸ್ಥಿತಿ. ಬೃಹತ್ ನಗರ ನಿರ್ಮಾಣಕ್ಕೆ ಮೂಲಸೌಕರ್ಯವನ್ನು ಪೂರೈಸುವುದು ಪ್ರಮುಖವಾಗುತ್ತದೆ. ಆದರೆ ಇಲ್ಲಿ ಅದೇ ಕೊರತೆಯಾಗಿದೆ. ಈಗಲೂ ಸರ್ಕಾರಿ ಕಚೇರಿಗಳು ತಾತ್ಕಾಲಿಕ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಈ ಹಿಂದೆ ಭರವಸೆ ನೀಡಿದ ಹೈ-ಸ್ಪೀಡ್ ರೈಲು ಸಂಪರ್ಕ, ನವೀನ ನಗರದ ವೈಶಿಷ್ಟ್ಯಗಳು ಹೀಗೆ ಯಾವುದರ ಕುರುಹಗಳು ಕೂಡ ಇಲ್ಲ. ಈ ನಡುವೆ ಕೆಲವು ಶಿಕ್ಷಣ ಸಂಸ್ಥೆಗಳು, ಕಂಪನಿಗಳು ಕಾರ್ಯಾರಂಭ ಮಾಡಿವೆ. ಒಟ್ಟಿನಲ್ಲಿ ಅಮರಾವತಿಯಲ್ಲಿ ಅರ್ಧಕ್ಕೆ ನಿಂತ ಕಟ್ಟಡಗಳು, ಖಾಲಿ ರಸ್ತೆಗಳನ್ನು ನೋಡದರೆ ನಚ್ಚುನೂರಾದ ಕನಸುಗಳು ಭರವಸೆಯ ಸಂಕೇತಗಳಂತೆ ಕಾಣುತ್ತವೆ.
ಬೆಲೆಗಳು ಗಗನಕ್ಕೆ: ಆಂಧ್ರ ಪ್ರದೇಶದ ಏಕೈಕ ರಾಜಧಾನಿ ಅಮರಾವತಿ ಎಂದು ಚಂದ್ರಬಾಬು ನಾಯ್ಡು ಅವರು ಘೋಷಣೆ ಮಾಡುತ್ತಿದ್ದಂತೆಯೇ ರಿಯಲ್ ಎಸ್ಟೇಟ್ ದಂಧೆ ಮತ್ತೆ ಗರಿಗೆದರಿದೆ. ಏಕಾಏಕಿ ಸೈಟುಗಳ ಬೆಲೆಯಲ್ಲಿ 20% ರಿಂದ 30 % ರಷ್ಟು ಹೆಚ್ಚಳವಾಗಿದೆ. ಸ್ಥಳೀಯ ಉದ್ಯಮಿಗಳು, ವ್ಯಾಪಾರಸ್ಥರು ನಗರದ ಆರ್ಥಿಕ ಮತ್ತು ನಿರ್ಮಾಣ ಚಟುವಟಿಕೆಗಳ ಮತ್ತೆ ಹೆಚ್ಚುವ ನಿರೀಕ್ಷೆಯನ್ನು ಹೊಂದಿದ್ದಾರೆ.
ಅಮರಾವತಿಯಲ್ಲಿ 9 ನಗರಗಳಿರುತ್ತವೆ:
1. ಸರ್ಕಾರಿ ನಗರ: ಇದು ಉತ್ತರ-ದಕ್ಷಿಣದಲ್ಲಿ ನೆಲೆಸಿರುತ್ತದೆ. ಇಲ್ಲಿ ಸರ್ಕಾರಿ ಕಚೇರಿಗಳ ಜತೆಗೆ ವಸತಿ ಪ್ರದೇಶಗಳನ್ನೂ ಅಭಿವೃದ್ಧಿಪಡಿಸಲಾಗುವುದು. ಈ ಇಡೀ ನಗರವು 1,093 ಹೆಕ್ಟೇರ್‌ಗಳಲ್ಲಿ ಹರಡುತ್ತದೆ.
2. ಜಸ್ಟಿಸ್ ಸಿಟಿ: ಸರ್ಕಾರಿ ನಗರದ ಪಕ್ಕದಲ್ಲಿ ಜಸ್ಟಿಸ್ ಸಿಟಿ ಸ್ಥಾಪಿಸಲಾಗುವುದು. ಇಲ್ಲಿ ನ್ಯಾಯಾಂಗಕ್ಕೆ ಸಂಬಂಧಿಸಿದ ಸಂಸ್ಥೆಗಳು ಇರುತ್ತವೆ. 1,339 ಹೆಕ್ಟೇರ್‌ನಲ್ಲಿ ನ್ಯಾಯ ನಗರ ನಿರ್ಮಾಣವಾಗಲಿದೆ.
3. ಹಣಕಾಸು ನಗರ: ಆಂಧ್ರದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ನಗರವನ್ನು ನಿರ್ಮಿಸಲಾಗುವುದು. ಇಲ್ಲಿ ವಾಣಿಜ್ಯ ಮತ್ತು ವಸತಿ ಪ್ರದೇಶಗಳೆರಡೂ ಇರಲಿವೆ. 2,091 ಹೆಕ್ಟೇರ್ ಪ್ರದೇಶದಲ್ಲಿ ಫೈನಾನ್ಸ್ ಸಿಟಿ ನಿರ್ಮಾಣವಾಗಲಿದೆ.
4. ನಾಲೆಡ್ಜ್ ಸಿಟಿ: ಇದು ಜಸ್ಟೀಸ್ ಮತ್ತು ಫೈನಾನ್ಸ್ ಸಿಟಿಯ ದಕ್ಷಿಣಕ್ಕೆ ಸ್ಥಾಪನೆಯಾಗುತ್ತದೆ. ಇಲ್ಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್, ಕಾಲೇಜು ಮತ್ತು ಜ್ಞಾನ ಪಾರ್ಕ್ ನಿರ್ಮಿಸಲಾಗುವುದು. 3,459 ಹೆಕ್ಟೇರ್‌ನಲ್ಲಿ ನಾಲೆಡ್ಜ್ ಸಿಟಿ ನಿರ್ಮಾಣವಾಗಲಿದೆ.
5. ಎಲೆಕ್ಟ್ರಾನಿಕ್ ಸಿಟಿ: ದಕ್ಷಿಣ ಭಾರತದಲ್ಲಿ ಬರುವ ಐಟಿ ಮತ್ತು ಎಲೆಕ್ಟ್ರಾನಿಕ್ ಉದ್ಯಮಗಳಿಗೆ ಎಲೆಕ್ಟ್ರಾನಿಕ್ ಸಿಟಿ ನಿರ್ಮಿಸಲಾಗುವುದು. 2,663 ಹೆಕ್ಟೇರ್‌ನಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣವಾಗಲಿದೆ.
6. ಹೆಲ್ತ್ ಸಿಟಿ: ರಾಜಧಾನಿಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗುವಂತಾಗಲು ಪ್ರತ್ಯೇಕ ಆರೋಗ್ಯ ನಗರಿ ಸ್ಥಾಪಿಸಲಾಗುವುದು. ಈ ಇಡೀ ನಗರವು 2,647 ಹೆಕ್ಟೇರ್‌ಗಳಲ್ಲಿ ಇರುತ್ತದೆ.
7. ಸ್ಪೋರ್ಟ್ಸ್ ಸಿಟಿ: ರಿವರ್‌ಫ್ರಂಟ್‌ನ ವಾಯುವ್ಯದಲ್ಲಿ ಕ್ರೀಡಾ ನಗರವನ್ನು ನಿರ್ಮಿಸಲಾಗುವುದು. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ದೊಡ್ಡ ಕ್ರೀಡಾಂಗಣಗಳು ಮತ್ತು ಈವೆಂಟ್ ಸ್ಥಳಗಳು ಇಲ್ಲಿ ಸಿದ್ಧವಾಗುತ್ತವೆ. 1,679 ಹೆಕ್ಟೇರ್‌ನಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಾಣವಾಗಲಿದೆ.
8. ಸಾಂಸ್ಕೃತಿಕ ನಗರ: ಅನಂತವರಂ ಬಳಿ ಮಾಧ್ಯಮ ಮತ್ತು ಸಾಂಸ್ಕೃತಿಕ ನಗರವನ್ನು ಅಭಿವೃದ್ಧಿಪಡಿಸಲಾಗುವುದು. ಅನಂತವರಂನಲ್ಲಿ ಐತಿಹಾಸಿಕ ಅನಂತವರಂ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ನಗರವನ್ನು 2,067 ಹೆಕ್ಟೇರ್‌ನಲ್ಲಿ ನಿರ್ಮಿಸಲಾಗುವುದು.
9. ಪ್ರವಾಸೋದ್ಯಮ ನಗರ: ಕೃಷ್ಣಾ ನದಿಯ ದಡದಲ್ಲಿರುವ ಉಂಡವಳ್ಳಿ ಗುಹೆಗಳ ಬಳಿ ಪ್ರವಾಸೋದ್ಯಮ ನಗರವನ್ನು ನಿರ್ಮಿಸಲಾಗುವುದು. ಈ ಇಡೀ ನಗರವು 4,716 ಹೆಕ್ಟೇರ್‌ಗಳಲ್ಲಿ ಇರುತ್ತದೆ.