ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕನಾಗಿ ಲಾಂಚ್ ಆಗುತ್ತಿರೋ ಚಿತ್ರ ಅಮರ್. ಈ ಕಾರಣದಿಂದಲೇ ಈ ಚಿತ್ರದ ಸಕಲ ಆಗುಹೋಗುಗಳ ಬಗ್ಗೆಯೂ ಜನರಿಗೊಂದು ಕುತೂಹಲವಿದೆ. ಅದಕ್ಕೆ ಸರಿಯಾಗಿಯೇ ನಿರ್ದೇಶಕ ನಾಗಶೇಖರ್ ಅವರು ಭಲೇ ಸ್ಪೀಡಿನಿಂದ ಕೆಲಸ ಮಾಡಲಾರಂಭಿಸಿದ್ದಾರೆ.
ಕೊಯಮತ್ತೂರಿನಿಂದ ಚಿತ್ರೀಕರಣ ಶುರು ಮಾಡಿದ್ದ ನಾಗಶೇಖರ್ ಯಶಸ್ವಿಯಾಗಿ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಅವರು ಮತ್ತೊಂದು ಹಂತದ ಚಿತ್ರೀಕರಣಕ್ಕೆ ಸರಿಕಟ್ಟಾದ ಪ್ಲಾನು ಮಾಡಿಕೊಂಡು ವಿದೇಶದತ್ತ ಹೊರಡಲು ರೆಡಿಯಾಗಿದ್ದಾರೆ.
ಅಂಬರೀಶ್ ಅವರ ಪುತ್ರ ಅಭಿಷೇಕ್ ಗೆ ಇದು ಮೊದಲ ಚಿತ್ರ. ಆದರೆ ಚಿತ್ರೀಕರಣ ಶುರುವಾದ ಬಳಿಕ ನಿರಂತರವಾಗಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಅವರ ಎನರ್ಜಿ ಕಂಡರೆ ಅಭಿ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕನಾಗಿ ನೆಲೆ ನಿಲ್ಲುವ ಭರವಸೆ ಮೂಡುತ್ತದೆ ಎಂಬಂಥಾ ಮೆಚ್ಚುಗೆಯನ್ನೂ ನಿರ್ದೇಶಕ ನಾಗಶೇಖರ್ ಹೊಂದಿದ್ದಾರೆ.
ಇದೀಗ ಕೊಯಮತ್ತೂರು, ಬೆಳಗಾವಿ, ಮಡಿಕೇರಿ, ಮಣಿಪಾಲ್, ಮಂಗಳೂರು ಸುತ್ತಮುತ್ತ ನಡೆದ ನಿರಂತರ ಚಿತ್ರೀಕರಣದಿಂದ ಚಿತ್ರ ತಂಡ ವಿರಾಮ ಪಡೆದಿದೆ. ಇದೀಗ ನಾಗಶೇಖರ್ ಅಣತಿಯಂತೆಯೇ ಹೊಸಾ ಹುರುಪು ತುಂಬಿಕೊಂಡು ವಿದೇಶಕ್ಕೆ ಹೊರಡಲು ಸಜ್ಜಾಗಿ ನಿಂತಿದೆ.
ಬೈಕ್ ರೇಸಿನ ಪ್ರಧಾನ ಅಂಶವನ್ನು ಹೊಂದಿರೋ ಈ ಚಿತ್ರ ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿ ಬಂದಿದೆಯಂತೆ. ಇದುವರೆಗೂ ಚಿತ್ರೀಕರಣಕ್ಕೆ ಡಿಫರೆಂಟಾದ ಲೊಕೇಶನ್ನುಗಳನ್ನೇ ಹುಡುಕುತ್ತಾ ಬಂದಿರೋ ನಾಗಶೇಖರ್ ವಿದೇಶದಲ್ಲಿಯೂ ಅಂಥಾದ್ದೇ ವಿರಳ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv