ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಹ ನೀಡಲ್ಲ ಇದೆಲ್ಲ ಸುಳ್ಳು ವದಂತಿ ಎಂದು ಶಾಸಕ ಹಾಗೂ ಮಾಜಿ ಸಚಿವ ಶಾಮನೂರ ಶಿವಶಂಕರಪ್ಪ ಹೇಳಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ಸಚಿವ ಸ್ಥಾನ ತಪ್ಪಿದಕ್ಕೆ ಪಕ್ಷದ ವಿರುದ್ಧ ಯಾವುದೇ ರೀತಿಯ ಬೇಸರವಿಲ್ಲ. ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ ಅವರಿಗೆ ನಾನು ಕೆಲಸ ಮಾಡುವೆ ಎಂದರು.
ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತಮ್ಮ ಜೊತೆ ಮಾತಾಡಿಲ್ಲ. ಉಳಿದ ಆರು ಸ್ಥಾನಗಳಿಗೆ ಸಚಿವರ ನೇಮಕ ಯಾವಾಗ ಆಗುತ್ತದೆ ಎಂದು ಹೇಳುವುದು ಕಷ್ಟ. ನಮ್ಮ ಜಿಲ್ಲೆಯಲ್ಲಿ ನನಗೆ ಸಚಿವ ಸ್ಥಾನ ನೀಡಿಲ್ಲ ಅಂತಾ ಪಾಲಿಕೆ ಹಾಗೂ ಎಪಿಎಂಸಿ ಅಧ್ಯಕ್ಷರು, ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆದ್ರೆ ನಾನು ರಾಜೀನಾಮೆ ನೀಡುವಂತೆ ಹೇಳಿಲ್ಲ ಎಂದು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ರು. ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪರಿಗೆ ತಪ್ಪಿದ ಸಚಿವ ಸ್ಥಾನ- ಕೈ ಕಾರ್ಪೊರೇಟರ್ ರಾಜೀನಾಮೆ
ಮಧ್ಯ ಕರ್ನಾಟಕದ ಮೂರು ಜಿಲ್ಲೆಗೆ ಸಚಿವ ಸ್ಥಾನದ ಭಾಗ್ಯ ಸಿಕ್ಕಿಲ್ಲ ಎನ್ನುವ ಪ್ರಶ್ನಗೆ ಉತ್ತರಿಸಿದ ಅವರು,ರಪ್ಪ, ನಾವೇನು 8 ಕ್ಕೆ 8 ಕ್ಷೇತ್ರಗಳನ್ನು ಗೆದ್ದಿದ್ದೇವಾ. ಗೆದ್ದಿರುವುದೇ ಒಂದೋ ಎರಡು ಕ್ಷೇತ್ರಗಳು ಮಾತ್ರ. ಗೆದ್ದು ಹಾಗೂ ಗೆಲ್ಲಿಸಿಕೊಂಡವರ ಮಾನದಂಡ ನೋಡಿ ಸಚಿವ ಸ್ಥಾನ ನೀಡಿದ್ದಾರೆ. ಅದಕ್ಕೆ ನಮ್ಮ ಬೇಸರವಿಲ್ಲ, ಅಲ್ಲದೆ ಪಕ್ಷ ಬಿಟ್ಟು ಹೋಗೋಲ್ಲ ಎಂದರು.
ದೇವೇಗೌಡರ ಹಾಗೂ ನಮ್ಮ ಮಧ್ಯ ಹಲವು ವರ್ಷಗಳಿಂದ ಸ್ನೇಹ ಸಂಬಂಧವಿದೆ. ದಾವಣಗೆರೆಗೆ ಬಂದರೆ ನಮ್ಮ ಮನೆಗೆ ಭೇಟಿ ನೀಡಿ ಹೋಗುತ್ತಾರೆ. ಅದಕ್ಕೆ ಬಣ್ಣ ಹಚ್ಚುವುದು ಸರಿಯಲ್ಲ. ಇನ್ನು ಸ್ವಾಮೀಜಿಗಳು ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡಿದ್ರೆ ಸಚಿವ ಸ್ಥಾನ ಇನ್ನೂ ದೂರವಾಗುತ್ತೆ ಎಂದು ಹಾಸ್ಯ ಮಾಡಿದ್ರು.