Bengaluru CityDistrictsKarnatakaLatestMain Post

ನಾನು ಯಾರಿಗೂ ಸುಪಾರಿ ನೀಡಿಲ್ಲ, ನಿಮ್ಮ ಟೈಮೂ ವೇಸ್ಟ್, ನನಗೂ ತೊಂದ್ರೆ – ಸಿಸಿಬಿ ಪೊಲೀಸರ ಬೆವರಿಳಿಸಿದ ಬೆಳಗೆರೆ

ಬೆಂಗಳೂರು: ಪತ್ರಕರ್ತ ಹಾಗೂ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ.

ವಿಚಾರಣೆಯ ವೇಳೆ ಯಾವುದೇ ಹೇಳಿಕೆ ನೀಡದಿರುವ ರವಿ ಬೆಳಗೆರೆ, ಯಾವ ಸುಪಾರಿಯೂ ನಾನು ನೀಡೇ ಇಲ್ಲ. ಕುಡಿದ ಮತ್ತಿನಲ್ಲಿ ಏನೋ ಹೇಳಿರಬಹುದು. ಅದನ್ನಾ ಪರಿಗಣಿಸೋಕೆ ಸಾಧ್ಯನಾ? ಎಂದು ಹೇಳಿದ್ದಾರೆ.

ಕುಡಿದ ಮತ್ತಿನಲ್ಲಿ ಹೇಳಿರಬಹುದು ಅದನ್ನೇ ನೀವು ಸುಪಾರಿ ಅಂತ ಇದ್ದೀರಿ. ನಾನೇನಾದರೂ ಹೊಸಬನ ಭೇಟಿ ಮಾಡಿ, ಮಾತನಾಡಿದ್ರೆ ನಿಮ್ಮ ಅನುಮಾನ ಸರಿಯಾಗಿ ಇರ್ತಿತ್ತು. ಆದ್ರೆ ನಾನು ನನ್ನ ಮಾಜಿ ಡ್ರೈವರ್ ಭೇಟಿಯಾಗಿದ್ದೆ. ಪರಿಸ್ಥಿತಿ ಒತ್ತಡಕ್ಕೆ ಸಿಕ್ಕಿ ಕೊಲೆಗಾರ ಆದ. ಕೊಲೆಗಾರನನ್ನು ಭೇಟಿ ಮಾಡಿದ್ರೆ ನಾನು ಕೊಲೆಗಾರನ ಕೊಲೆ ಮಾಡಿಸ್ತೀನಾ?. ಸುಮ್ಮನೆ ನಿಮಗೂ ಕಾಲಹರಣ ನನಗೂ ಹಿಂಸೆನ್ರಪ್ಪ ಅಂತ ಸಿಸಿಬಿ ಅಧಿಕಾರಿಗಳಿಗೆಯೇ ರವಿ ಬೆಳಗೆರೆ ಟಾಂಗ್ ನೀಡಿದ್ದಾರೆ.

ರವಿ ಬೆಳಗೆರೆ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಈಗಾಗಲೇ ಪೊಲೀಸರು ಸಿಸಿಟಿವಿ, ಫೋನ್ ಕರೆಯನ್ನೇ ಆಧರಿಸಿ ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಈಗಾಗಲೇ ಸುನಿಲ್ ಹೆಗ್ಗರವಳ್ಳಿ ಹೇಳಿಕೆ ಕೂಡ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮೂಲಗಳ ಮಾಹಿತಿ ನೀಡಿವೆ.

ಎಫ್‍ಐಆರ್ ದಾಖಲು: ರವಿಬೆಳಗೆರೆ ಬಂಧನ ಪ್ರಕರಣದ ಬಳಿಕ ಹಾಯ್ ಬೆಂಗಳೂರು ಕಚೇರಿಯಲ್ಲಿ ಜಿಂಕೆ ಚರ್ಮ, ಆಮೆ ಚಿಪ್ಪು ಪತ್ತೆ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಹೀಗಾಗಿ ಶನಿವಾರ ಅರಣ್ಯಾಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ವಶಕ್ಕೆ ಪಡೆದಿದ್ದರು. ಸದ್ಯ ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ರವಿಬೆಳಗೆರೆ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.

ಆರೋಗ್ಯದಲ್ಲಿ ಏರುಪೇರು: ರವಿಬೆಳಗೆರೆಯವರಿಗೆ ಮತ್ತೆ ಲೋ ಶುಗರ್, ಲೋ ಬಿಪಿಯಾಗಿ ಆರೋಗ್ಯದಲ್ಲಿ ಏರಪೇರಾಗಿದೆ. ಹೀಗಾಗಿ ವೈದಕೀಯ ತಪಾಸಣೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರವಿಬೆಳಗೆರೆ ಹೈಡ್ರಾಮ ಮಾಡಿದ್ದು, ಸಿಗರೇಟ್ ಬೇಕಾಂತ ಹಠ ಹಿಡಿದಿದ್ದರು. ಅಲ್ಲದೇ ಕಾರಿಗೆ ಕಾಲು ಅಡ್ಡ ಇಟ್ಟಿಕೊಂಡು ಸಿಗರೇಟ್ ಕೊಡದೆ ಇದ್ರೆ ಕಾಲು ತೆಗೆಯಲ್ಲ ಅಂತಾ ಹಠ ಮಾಡಿದ್ದಾರೆ.

ಸಿಗರೇಟು ಕೊಡದೇ ಇದ್ದಿದ್ದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನಿನಲ್ಲಿಯೇ ಅವಕಾಶ ಇದೆ, ಕೊಡೊದಕ್ಕೆ ನಿಮಗೇನು ಅಂತ ಬೈಯ್ದಿದ್ದಾರೆ. ಮನವೊಲಿಸಲು ಹೋದ ಮಗ ಕರ್ಣನ ಮೇಲೂ ಕಿಡಿಕಾರಿದ್ದಾರೆ. ಕೊನೆಗೆ ಸಿಸಿಬಿ ಪೊಲೀಸರು ಸಿಗರೇಟು ಕೊಟ್ಟು ಸೇದಿಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಕಾಲಿಗೆ ಗಾಯ ಆಗಿದೆ ನಿಮಗೆ ಮನುಷ್ಯತ್ವ ಇಲ್ವಾ ಅಂತ ಪೊಲೀಸರಿಗೆ ಬೆಳಗೆರೆ ತರಾಟೆ ತೆಗೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮದವರನ್ನು ಹತ್ತಿರ ಕರೆದು ಎಷ್ಟು ದಿನ ಅಂತ ನನ್ನನ್ನೇ ಕಾಯ್ತಿರೋ ಬೇಜರಾಗೊಲ್ವಾ..? ಮತ್ತೆ ಸಿಕ್ತೀನಿ ಬಿಡ್ರೋ ಅಂತ ಹೇಳಿದ್ದಾರೆ.

https://www.youtube.com/watch?v=Gw8qDp91QbA

https://www.youtube.com/watch?v=7FMDBk4SZIs

https://www.youtube.com/watch?v=BSYzOrn_xUM

Leave a Reply

Your email address will not be published.

Back to top button