– ಆರೋಗ್ಯಕ್ಕೆ ತುಂಗಾಪಾನ ಅಪಾಯ?
ಶಿವಮೊಗ್ಗ: ಮಲೆನಾಡಿನ ಜೀವನದಿ ತುಂಗಾನದಿ. ಗಂಗಾ ಸ್ನಾನ – ತುಂಗಾ ಪಾನ ಎಂಬುದು ಪ್ರಸಿದ್ಧ ನಾಣ್ಣುಡಿ. ಆದರೆ ಇನ್ನು ಮುಂದೆ ತುಂಗೆಯ ನೀರನ್ನು ಕುಡಿಯುವ ಮೊದಲು ಯೋಚಿಸಬೇಕಿದೆ. ಇದಕ್ಕೆ ಕಾರಣ ಪ್ರಯೋಗಾಲಯದ ವರದಿ.
ಮಲೆನಾಡಿನ ಜಿಲ್ಲೆ ಶಿವಮೊಗ್ಗ (Shivamogga) ಸೇರಿದಂತೆ ದಾವಣಗೆರೆ ಜಿಲ್ಲೆಯ ಹಲವು ಗ್ರಾಮಗಳಿಗೆ ಕುಡಿಯಲು ತುಂಗಾ ನದಿ (Tunga River) ನೀರೆ ಆಸರೆ. ಆದರೆ ಇತ್ತೀಚಿಗೆ ತುಂಗಾನದಿ ನೀರು ಮಲಿನವಾಗುತ್ತಿದೆ (Water Pollution) ಎಂಬ ಅಂಶ ಪ್ರಯೋಗಾಲಯದ ವರದಿಯಿಂದ ಬಹಿರಂಗಗೊಂಡಿದೆ. ಇದು ಮಲೆನಾಡಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.
ತುಂಗಾ ನದಿ ನೀರು ಗಾಜನೂರು ಜಲಾಶಯದಿಂದ ಮುಂದೆ ಹರಿಯುವಾಗ ಮಲಿನಗೊಳ್ಳುತ್ತಿದೆ. ಅದರಲ್ಲೂ ಜಿಲ್ಲಾ ಕೇಂದ್ರ ತಲುಪುತ್ತಿದ್ದಂತೆ ಮತ್ತಷ್ಟು ವಿಷಕಾರಕ ಅಂಶಗಳು ನೀರಿಗೆ ಸೇರುತ್ತಿದೆ. ತುಂಗಾನದಿ ನೀರಿನಲ್ಲಿ ಅಲ್ಯುಮಿನಿಯಂ ಅಂಶ ಹೆಚ್ಚಿರುವುದು ದೃಢಪಟ್ಟಿದೆ.
ಗುಣಮಟ್ಟದ ನೀರಿನಲ್ಲಿ ಎಲ್ಲಾ ಖನಿಜಾಂಶಗಳು ನಿಗದಿತ ಪ್ರಮಾಣದಲ್ಲಿ ಇರಬೇಕು. ಆಗ ಮಾತ್ರ ಅದು ಕುಡಿಯಲು ಹಾಗೂ ಆರೋಗ್ಯಕ್ಕೆ ಪೂರಕವಾಗಿ ಇರುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಖನಿಜಾಂಶ ಹೆಚ್ಚಳವಾದರೂ ಆರೋಗ್ಯಕ್ಕೆ ಅಪಾಯಕಾರಿ. ಈಗ ತುಂಗೆಯ ಸ್ಥಿತಿಯು ಅಪಾಯಕಾರಿ ಹಂತ ತಲುಪಿದೆ.
ಶಿವಮೊಗ್ಗದ ಕೆಲವು ಪರಿಸರ ಆಸಕ್ತರು ಸೇರಿಕೊಂಡು ನಿರ್ಮಲ ತುಂಗಾ ಅಭಿಯಾನ ಆರಂಭಿಸಿದ್ದರು. ಈ ತಂಡ ಜಲಾಶಯದ ಮಧ್ಯ ಭಾಗದಿಂದ ನದಿ ನೀರು ಹಾಗೂ ನೀರು ಶುದ್ಧೀಕರಣ ಘಟಕದಿಂದ ನಾಗರಿಕರಿಗೆ ಪೂರೈಕೆಯಾಗುವ ನೀರು ಎರಡನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಬೆಂಗಳೂರಿನ ಯುರೋಪಿನ್ಸ್ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ಪ್ರಯೋಗಾಲಯದಿಂದ ವರದಿ ಬಂದಿದ್ದು ತುಂಗಾ ನದಿಯಲ್ಲಿ ಅಲ್ಯುಮಿನಿಯಂ ಅಂಶ ಇರುವುದು ಪತ್ತೆಯಾಗಿದೆ.
ಸಾಮಾನ್ಯವಾಗಿ ಕುಡಿಯುವ ಪ್ರತಿ ಲೀಟರ್ ನೀರಿನಲ್ಲಿ ಅಲ್ಯುಮಿನಿಯಂ ಪ್ರಮಾಣ 0.2 – 0.03 ಮಿಲಿ ಗ್ರಾಂ ಇರಬೇಕು. ಆದರೆ ತುಂಗಾ ನದಿಯ ನೀರಿನಲ್ಲಿ ಇದರ ಪ್ರಮಾಣ 0.205 ಮಿಲಿಗ್ರಾಂ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಇದು ನದಿ ನೀರಿನ ಮಲಿನಕ್ಕೆ ಉದಾಹರಣೆಯಾಗಿದೆ. ಇದನ್ನೂ ಓದಿ: ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರ – ವಿಧ್ವಂಸಕ ಕೃತ್ಯಕ್ಕೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಪ್ಲ್ಯಾನ್
ಅಲ್ಯುಮಿನಿಯಂ ಪ್ರಮಾಣ ಹೆಚ್ಚಿರುವ ನೀರು ಸೇವಿಸಿದರೆ ಕ್ರಮೇಣ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ನರಸಂಬಂಧಿ ಕಾಯಿಲೆಗಳು ಭಾಧಿಸುವ ಅಪಾಯ ಇರುತ್ತದೆ. ಇಂತಹ ನೀರು ಸೇವಿಸಿದರೆ ಅಡ್ಡ ಪರಿಣಾಮಗಳು ಇವೆ ಎಂಬುದು ಆತಂಕದ ಸಂಗತಿಯಾಗಿದೆ.
ತುಂಗಾ ನದಿ ನೀರಿನಲ್ಲಿ ಅಲ್ಯುಮಿನಿಯಂ ಅಂಶ ಮಾತ್ರ ಹೆಚ್ಚಳವಾಗಿರದೇ, ಈ ನೀರಿನಲ್ಲಿ ಇತರೆ ಲೋಹದ ಅಂಶಗಳು ಇವೆ. ಆದರೆ ಅವುಗಳು ನಿಗದಿತ ಪ್ರಮಾಣ ಮೀರಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಬೇರಿಯಂ, ಬೋರಾನ್, ಕ್ಲೋರೈಡ್, ಮ್ಯಾಗ್ನೇಶಿಯಂ, ಕ್ಯಾಡ್ಮಿಯಂ, ಪಾದರಸ ಇರುವುದು ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿದೆ.
ಒಟ್ಟಿನಲ್ಲಿ ತುಂಗಾನದಿಯಲ್ಲಿ ಅಲ್ಯುಮಿನಿಯಂ ಅಂಶ ಸೇರುತ್ತಿರುವುದರ ಜೊತೆಗೆ ನಾಗರಿಕರು ಸಹ ಕಸ ಹಾಗೂ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇದು ಸಹ ನದಿ ಮಲಿನವಾಗಲು ಕಾರಣವಾಗುತ್ತಿದೆ. ಇನ್ನಾದರೂ ನಾಗರಿಕರು ಎಚ್ಚೆತ್ತುಕೊಂಡು ನದಿಗೆ ಕಸ ಎಸೆಯದಂತೆ, ತ್ಯಾಜ್ಯ ಸುರಿಯದಂತೆ ಕ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯವಂತು ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: ವಂದೇ ಭಾರತ್ ಸೆಮಿಸ್ಪೀಡ್ ರೈಲಿನಲ್ಲಿ ಓಡಾಡ್ಬೇಕು ಎಂಬ ಉತ್ತರ ಕರ್ನಾಟಕ ಜನರ ಕನಸು ಶೀಘ್ರವೇ ನನಸು!