ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ನಾಮಪತ್ರ ತಿರಸ್ಕರಿಸುವಂತೆ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಖಾನ್ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಈ ದೂರಿಗೆ ಚುನಾವಣಾ ಅಧಿಕಾರಿ ರೂಪಾ ಪ್ರತಿಕ್ರಿಯಿಸಿ, ಜಮೀರ್ ನಾಮಪತ್ರದಲ್ಲಿ ಸಣ್ಣ ಪುಟ್ಟ ಲೋಪ ದೋಷಗಳಿದ್ದವು. ನಾವು ನೋಟಿಸ್ ಕೊಟ್ಟಿದ್ದೆವು, ಸರಿ ಪಡಿಸಿದ್ದಾರೆ. ರಾಜಿನಾಮೆಗೆ ಸಂಬಂಧಿಸಿದಂತೆ ಸ್ಪೀಕರ್ ಬಳಿ ಪ್ರಕರಣ ಬಾಕಿ ಇದೆ. ಪ್ರಕರಣ ಇತ್ಯರ್ಥ ಆಗದ ಕಾರಣ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಏನಾದರು ಆಕ್ಷೇಪಣೆಗಳಿದ್ದರೆ ಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದು ಎಂದು ತಿಳಿಸಿದ್ದಾರೆ.
Advertisement
ದೂರಿನಲ್ಲಿ ಏನಿದೆ?
ಜಮೀರ್ ಶಾಸಕ ಸ್ಥಾನದ ಅನರ್ಹತೆ ವಿಚಾರಣೆ ಹೈ ಕೋರ್ಟ್ ನಲ್ಲಿ ನಡೆಯುತ್ತಿದೆ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ ಹೊರತು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಈ ವಿಚಾರವನ್ನ ಅಫಿಡವಿಟ್ ನಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಿಲ್ಲ. ಅಫಿಡವಿಟ್ ನ ಯಾವುದೇ ಕಲಂ ಗಳನ್ನ ಖಾಲಿ ಬಿಡುವಂತಿಲ್ಲ. ಆದರೆ ಅಫಿಡವಿಟ್ ನಲ್ಲಿ ಹೆಂಡತಿಯ ಆಸ್ತಿ ಕಲಂ ನಲ್ಲಿ ಏನನ್ನೂ ಬರೆದಿಲ್ಲ. ಹಾಗಾಗಿ ಜಮೀರ್ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಅಲ್ತಾಫ್ ಖಾನ್ ದೂರಿನಲ್ಲಿ ಮನವಿ ಮಾಡಿಕೊಂಡಿದ್ದರು.