ಮೈಸೂರು: ದೇಶ ಕಾಯೋ ಕೆಲಸವನ್ನು ಮಾಡುತ್ತಿದ್ದ ಯೋಧನೊಬ್ಬ ಮದುವೆ ಆಗುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದು, ಈಗ ಆತನ ನಿಜ ಬಣ್ಣ ಬಯಲಾಗಿ ಪ್ರಸ್ತುತ ಪೊಲೀಸರ ಅತಿಥಿಯಾಗಿದ್ದಾನೆ.
ಜಿಲ್ಲೆಯ ಸಾಲಿಗ್ರಾಮದ ನಿವಾಸಿಯಾಗಿರುವ ಯೋಧ ಶಿವನಂಜಪ್ಪ ಐದನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ. ವಿಜಯನಗರದ ಯೋಗಾನರಸಿಂಹ ಸ್ವಾಮಿ ದೇಗುಲದಲ್ಲಿ ಐದನೇ ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲಿ ಯೋಧನ ನಿಜ ರೂಪ ಬಯಲಾಗಿದೆ. ಶಿವನಂಜಪ್ಪ ಮೊದಲ ಪತ್ನಿ ತಮ್ಮ ಮದುವೆಯ ಫೋಟೋಗಳನ್ನು ಕಲ್ಯಾಣ ಮಂಟಪದಲ್ಲಿ ತೋರಿಸಿ ಮದುವೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆಯೇ ಶಿವನಂಜಪ್ಪಗೆ ವರಲಕ್ಷ್ಮಿ ಜೊತೆ ಮೊದಲ ವಿವಾಹವಾಗಿದ್ದು, ಮದುವೆಯ ನಂತರ ಇವರಿಗೆ ವರದಕ್ಷಿಣೆ ಕಿರುಕುಳವನ್ನು ನೀಡಿ ದೂರ ಮಾಡಿದ್ದ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಯ ಹಂತದಲ್ಲಿದೆ. ಅಲ್ಲದೇ ಮೊದಲ ಪತ್ನಿಯಿಂದ ದೂರವಾದ 2 ವರ್ಷದ ನಂತರ ಅದೇ ಗ್ರಾಮದ ಮತ್ತೊಬ್ಬ ಯುವತಿಯ ಜೊತೆ ಮದುವೆಯಾಗಿದ್ದ. ಇದಾದ ಬಳಿಕ ಇನ್ನಿಬ್ಬರ ಜೊತೆ ಮದುವೆ ಮಾಡಿಕೊಂಡಿದ್ದ.
ಪ್ರಸ್ತುತ ಶಿವನಂಜಪ್ಪನ ಮೊದಲ ಪತ್ನಿ ಆತನ ವಿರುದ್ಧ ದೂರು ನೀಡಿದ್ದು, ಇನ್ನುಳಿದ ಇಬ್ಬರು ಪತ್ನಿಯರು ಮರ್ಯಾದೆ ಪ್ರಶ್ನೆಯಿಂದ ಈ ವಿಷಯದಿಂದ ದೂರ ಉಳಿದಿದ್ದಾರೆ. ಸದ್ಯ ವಿಜಯನಗರ ಪೊಲೀಸರು ಶಿವನಂಜಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.