ಬೆಂಗಳೂರು: ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಮೇಲೆ ಕಾಂಗ್ರೆಸ್ ಜಯನಗರವನ್ನೇ ಮರೆತಿದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ಹೌದು. ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಜೂನ್ 11 ರಂದು ಚುನಾವಣೆ ನಿಗದಿಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯವರು ಭರ್ಜರಿ ಪ್ರಚಾರ ನಡೆಸುತ್ತಿದ್ದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿ ಆಗಿರುವ ಕಾಂಗ್ರೆಸ್ ನಾಯಕರು ಜಯನಗರದತ್ತ ತಿರುಗಿಯೂ ನೋಡುತ್ತಿಲ್ಲ.
Advertisement
ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಇಲ್ಲಿ ಕಣದಲ್ಲಿದ್ದಾರೆ. ರಾಮಲಿಂಗಾರರೆಡ್ಡಿ ಕಾಂಗ್ರೆಸ್ಸಿನ ಹಿರಿಯ ನಾಯಕರಾದ್ರೂ ಅವರಿಗೆ ಈ ಬಾರಿ ಹೈ ಕಮಾಂಡ್ ಸಚಿವ ಸ್ಥಾನ ಕೈ ಕೊಟ್ಟಿದೆ. ಇತ್ತ ಜಯನಗರ ಚುನಾವಣೆಗೆ ಯಾವುದೇ ಕಾಂಗ್ರೆಸ್ ನಾಯಕರು ಅವರಿಗೆ ಸಾಥ್ ನೀಡುತ್ತಿಲ್ಲ. ಹೀಗಾಗಿ ತಂದೆಯ ಜೊತೆ ಸೌಮ್ಯಾ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಏಕಾಂಗಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.
Advertisement
ಇತ್ತ ಮತ್ತೊಮ್ಮೆ ಜಯನಗರನ್ನು ತನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಮಾತ್ರ ಜಯನಗರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಅನಂತ್ ಕುಮಾರ್, ಶೋಭಾ ಕರಂದ್ಲಾಜೆ ಹಾಗೂ ಸದಾನಂದಗೌಡ ಸೇರಿದಂತೆ ಹಿರಿಯ ನಾಯಕರ ದಂಡೇ ಜಯನಗರದಲ್ಲಿ ಪ್ರಚಾರ ಮಾಡುತ್ತಿದೆ.
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ:
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ ಎನ್ನಲಾಗುತ್ತಿದೆ. ಈಗಾಗಲೇ ರಾಮಲಿಂಗಾರೆಡ್ಡಿ ದೇವೇಗೌಡರನ್ನು ಸಂಪರ್ಕಿಸಿ ಮೈತ್ರಿ ಕುರಿತು ಮಾತನಾಡಿದ್ದಾರೆ. ಅದಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಕೂಡಾ ಅಸ್ತು ಅಂದಿದ್ದಾರೆ. ಹಾಗಾಗಿ ಜಯನಗರ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಆದ್ರೆ ಬಿಜೆಪಿ ಮಾತ್ರ ಎಲ್ಲಿಲ್ಲದ ಕಸರತ್ತು ನಡೆಸಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ನಿಧನರಾದ ವಿಜಯಕುಮಾರ ಸಹೋದರ ಪ್ರಹ್ಲಾದ್ ಅವರು ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.