-ಸಿಸಿಬಿ ಅಧಿಕಾರಿಗಳ ಚಳಿ ಬಿಡಿಸಿದ ಅಲೋಕ್ ಕುಮಾರ್
ಬೆಂಗಳೂರು: ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸಿಸಿಬಿ ಎಡಿಜಿಪಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ‘ತ್ರೀ ಮಂಥ್ ಮಿಷನ್’ ಹೆಸರಿನಲ್ಲಿ ಬೆಂಗಳೂರು ಕಿಂಗ್‍ಪಿಂನ್‍ಗಳ ಕ್ಲೀನ್‍ಗೆ ಮುಂದಾಗಿದ್ದಾರೆ.
ಇಂದು ಕಮೀಷನರ್ ಕಚೇರಿಯಲ್ಲಿ ಸಿಸಿಬಿಯ ಎಲ್ಲ ಎಸಿಪಿ, ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಜೊತೆಗೆ ಅಲೋಕ್ ಕುಮಾರ ಸಭೆ ನಡೆಸಿದ್ದು, ಈ ವೇಳೆ ಕಿಂಗ್‍ಪಿನ್‍ಗಳ ಮಟ್ಟಹಾಕುವ ಕಾರ್ಯಾಚರಣೆ ಕುರಿತು ಮಾಹಿತಿ ಹಾಗೂ ಸೂಚನೆ ನೀಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
Advertisement
Advertisement
ಸಭೆಯಲ್ಲಿ ಚರ್ಚೆ ಆಗಿದ್ದೇನು?
ಸಂಘಟಿತ ಅಪರಾಧ ತಡೆ ಸೇರಿದಂತೆ ಮೀಟರ್ ಬಡ್ಡಿ ವ್ಯವಹಾರ, ಲ್ಯಾಂಡ್ ಗ್ರ್ಯಾಬಿಂಗ್, ಮಟ್ಕಾ ದಂಧೆ, ಇಸ್ಪೀಟ್ ಅಡ್ಡೆಗಳಿಗೆ ಬ್ರೇಕ್ ಹಾಕಲು ಮೊದಲ ಆದ್ಯತೆ ನೀಡಬೇಕು. ರಿಯಲ್ ಎಸ್ಟೇಟ್ ಮಾಫಿಯಾ, ಸಿವಿಲ್ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬಾರದು. ಸದಾ ಜಾಗೃತರಾಗಿದ್ದು, ರೌಡಿಗಳ ಪತ್ತೆ ಹಾಗೂ ಅವರ ಮೇಲೆ ನಿಗಾ ಇಡಬೇಕು. ಸಿಸಿಬಿ ಅಂದ್ರೆ ವಾರ್ ರೂಮ್, ಹಗಲು-ರಾತ್ರಿ ಕೆಲಸ ನಡೆಯುತ್ತಿರಬೇಕು. ದಿನಾಂಕ ಗುರುತಿಸಿ ಕೆಲಸ ಮಾಡುವುದನ್ನು ಬಿಟ್ಟು, 24*7 ವಾರ್ ರೀತಿ ಕೆಲಸ ಮಾಡಬೇಕು. ಕೂಡಲೇ ಎಲ್ಲರೂ ಕಾರ್ಯ ಪ್ರವೃತ್ತರಾಗಿ, ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ನಮ್ಮ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳು, ಸಾರ್ವಜನಿಕರು ಮತ್ತು ರಾಜಕಾರಣಿಗಳಿಗೆ ನಂಬಿಕೆ ಬರುವಂತಿರುವಂತೆ ಕೆಲಸ ನಿರ್ವಹಿಸಬೇಕು. ಈ ಮೂಲಕ ಸಿಸಿಬಿಗೆ ಮತ್ತೆ ಹಳೇ ಚಾರ್ಮ್ ತಂದುಕೊಡಲು ಶ್ರಮಿಸಿ ಎಂದು ಸೂಚಿಸಿರುವ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಕಳುಹಿಸಿದ್ದಾರೆ. ನಂಬಿಕೆ ಉಳಿಸಿಕೊಳ್ಳುವ ರೀತಿ ಕೆಲಸ ಆಗಬೇಕು ಎಂದು ಎಚ್ಚರಿಕೆ ನೀಡಿದ್ದಾರಂತೆ.
ನಾರ್ವೆ ಸೋಮಶೇಖರ್ ಹೆಸರು ಎತ್ತಿದ ಅಲೋಕ್ ಕುಮಾರ್, ಸೋಮಶೇಖರ್ ಈಗ ಏನು ಮಾಡುತ್ತಿದ್ದಾನೆ ಅಂತ ನಿಮಗೆ ಗೊತ್ತಿದೆಯಾ? ಏನು ಕೆಲಸವಿಲ್ಲದೆ ಅವನಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಈ ಬಗ್ಗೆ ನನಗೆ ಮಾಹಿತಿ ಇದೆ. ಯಾರ ಹಿಂದೆ ಯಾರು ಇದ್ದಾರೆ ಎನ್ನವ ಲಿಸ್ಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳಿ ಕ್ಲಾಸ್:
ಒಂದು ವರ್ಷದಿಂದ ಎಷ್ಟು ಕೆಲಸ ಮಾಡಿರುವಿರಿ, ಎಷ್ಟು ಪ್ರಕರಣ ದಾಖಲಿಸಿರುವಿರಿ, ಗೀತಾ ವಿಷ್ಣು ಪ್ರಕರಣದ ಕುರಿತು ಚಾರ್ಜ್ ಶೀಟ್ ಏಕೆ ಹಾಕಿಲ್ಲ? ಆರು ತಿಂಗಳನಿಂದ ಬಾಕಿಯಿರುವ ಪ್ರಕರಣಗಳು ಎಷ್ಟು? ಎಂದು ಪ್ರಶ್ನಿಸಿರುವ ಅವರು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ನಮ್ಮ ಕೆಲಸ ನಮಗೆ ತೃಪ್ತಿ ತರುವಂತಿರಬೇಕು. ಕೆಲಸ ಮಾಡಲು ಆಗದವರು ಜಾಗ ಖಾಲಿ ಮಾಡಿ. ನಾನು ನಿಮ್ಮ ಹತ್ತಿರ ಬೇರೆ ಏನೂ ಕೇಳುವುದಿಲ್ಲ, ಕೆಲಸ ಮಾತ್ರ ಕೇಳುತ್ತೇನೆ ಎಂದು ತಿಳಿಸಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv