ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸಿದ್ದು, ಪ್ರಕರಣದಲ್ಲಿ ಹೊಸ ಹೊಸ ಟ್ವಿಸ್ಟ್ ಲಭಿಸುತ್ತಿದೆ. ಗುರುವಾರ ಇಡೀ ದಿನ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದ ಸಿಬಿಐ ಅಧಿಕಾರಿಗಳಿಗೆ ಸ್ಫೋಟಕ ಅಂಶಗಳು ಲಭ್ಯವಾಗಿದೆ ಎಂಬ ಮಾಹಿತಿ ಲಭಿಸಿದೆ.
ಇಡೀ ದಿನ ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಅವರನ್ನು ಪ್ರಶ್ನಿಸಿದ್ದು, ಈ ಸಂದರ್ಭದಲ್ಲಿ ಪ್ರಕರಣದ ಹಲವಾರು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಪ್ರಕರಣ ಕೆಲ ಸತ್ಯಾಂಶಗಳನ್ನು ಅಲೋಕ್ ಕುಮಾರ್ ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಅವರಿಗೆ ಸಿಬಿಐ ಅಧಿಕಾರಿಗಳು, ಕೆಳಗಿನ ಅಧಿಕಾರಿಗಳಿಗೆ ಟ್ಯಾಪಿಂಗ್‍ಗೆ ಸೂಚಿಸಿದ್ದೀರಿ, ಯಾವ ಉದ್ದೇಶದಿಂದ ನೀವು ಫೋನ್ ಮಾಡಿದ್ದು ಎಂದು ಪ್ರಶ್ನಿಸಿದ್ದು, ಈ ಪ್ರಶ್ನೆಗಳಿಗೆ ಉತ್ತರಿಸಿರುವ ಅಲೋಕ್ ಕುಮಾರ್ ಅಚ್ಚರಿ ಮೂಡಿಸುವಂತಹ ಸತ್ಯಾಂಶಗಳನ್ನು ಬಿಚ್ಚಿಟ್ಟಿದ್ದಾರೆ.
Advertisement
Advertisement
ಅಲೋಕ್‍ಕುಮಾರ್ ಹೇಳಿದ್ದೇನು?
ಫೋನ್ ಟ್ಯಾಪಿಂಗ್ ಬಗ್ಗೆ ಅಲೋಕ್ ಕುಮಾರ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಕೆಲ ಅಧಿಕಾರಿಗಳಿಗೆ ಗುಟ್ಟುಬಿಟ್ಟು ಕೊಟ್ಟಿದ್ದು, ಇದರ ಹಿಂದಿನ ಉದ್ದೇಶವನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದರು. ಸಿಬಿಐ ಕೇಳಿದ ಪ್ರಶ್ನೆಗೆ ಸತ್ಯ ಬಿಚ್ಚಿಟ್ಟ ಅಲೋಕ್‍ಕುಮಾರ್ ಅವರು, ‘ದೊಡ್ಡವರ’ ಸೂಚನೆಯಂತೆ ಕೆಲವರ ಫೋನ್ ಟ್ಯಾಪಿಂಗ್ ನಡೆದಿದೆ. ಅವರು ಕೊಟ್ಟ ನಂಬರ್ ಗಳು ಟ್ಯಾಪಿಂಗ್ ಆಗಿದೆ ಎಂದು ತಿಳಿಸಿದ್ದಾರೆ.
Advertisement
ಸಿಬಿಐ ಅಧಿಕಾರಿಗಳ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿರುವ ಅಲೋಕ್ ಕುಮಾರ್ ಅವರು, ಫೋನ್ ಟ್ಯಾಪಿಂಗ್‍ಗೆ ಸೂಚನೆ ಕೊಟ್ಟಿದ್ದು ‘ದೊಡ್ಡವರೇ’, ಅವರ ಸೂಚನೆಯಂತೆ ಕೊಟ್ಟ ಫೋನ್ ನಂಬರ್ ಗಳನ್ನು ಫೋನ್ ಟ್ಯಾಪ್ ಮಾಡಿ ಕೆಳ ಅಧಿಕಾರಿಗಳಿಗೆ ತಲುಪಿಸಲಾಗಿದೆ. ನನಗೆ ವಾಟ್ಸಾಪ್‍ನಲ್ಲಿ ಸಂದೇಶ ನೀಡುತ್ತಿದ್ದರು. ಅದರಂತೆ ನಾನು ಮಾಡಿದ್ದೇನೆ. ಈ ಕುರಿತ ಎಲ್ಲಾ ಮಾಹಿತಿಯನ್ನು ನಾನು ಸ್ಟೇಟ್‍ಮೆಂಟ್ ನೀಡುವಾಗ ಹೇಳುತ್ತೇನೆ ಎಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
Advertisement
ಸದ್ಯ ಅಲೋಕ್ ಕುಮಾರ್ ಬಿಚ್ಚಿಟ್ಟಿರುವ ಈ ಮಾಹಿತಿಯ ಅನ್ವಯ ಅವರು ಹೇಳಿರುವ ‘ದೊಡ್ಡವರು’ ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು, ಫೋನ್ ಟ್ಯಾಪ್ ಮಾಡಲು ಸೂಚನೆ ನೀಡಿದ್ದು, ಡಿಜಿಪಿ ಅವರ ಅಥವಾ ಮಾಜಿ ಗೃಹ ಸಚಿವರಾ, ಮಾಜಿ ಉಪ ಮುಖ್ಯಮಂತ್ರಿಗಳಾ ಅಥವಾ ಮಾಜಿ ಮುಖ್ಯಮಂತ್ರಿಗಳಾ ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಪ್ರಕರಣದ ತನಿಖೆ ಚುರುಕುಗೊಂಡಿರುವುದರಿಂದ ಕಳ್ಳಗಿವಿ ಪ್ರಕರಣ ‘ದೊಡ್ಡವರಿಗೂ’ ಉರುಳಾಗುತ್ತಾ? ವಾಟ್ಸಾಪ್ ಮೂಲಕ ಸಂದೇಶ ರವಾನೆಯಾಗಿರುವುದರಿಂದ ಸಿಬಿಐ ವಾಟ್ಸಾಪ್ ಕೂಡ ಪರಿಶೀಲನೆ ನಡೆಸುತ್ತಾ? ಮುಂದಿನ ವಿಚಾರಣೆಯಲ್ಲಿ ದೊಡ್ಡವರಿಗೂ ಸಂಕಷ್ಟ ಎದುರಾಗಲಿದೆಯಾ ಎಂಬ ಹಲವು ಪ್ರಶ್ನೆಗಳು ಮೂಡಿದೆ.
ಪ್ರಮುಖವಾಗಿ ‘ದೊಡ್ಡವರು’ ನೀಡಿರುವ ಸೂಚನೆ ಮೇರೆಗೆ ರಾಜಕಾರಣಿಗಳು, ಪೊಲೀಸರು ಹಾಗೂ ಮಠಾಧೀಶರ ಫೋನ್ ಕೂಡ ಟ್ಯಾಪಿಂಗ್ ಮಾಡಲಾಗಿದ್ದು, ಆದಿಚುಂಚನಗಿರಿ ಸ್ವಾಮೀಜಿ ಅವರ ಫೋನ್ ಕೂಡ ಟ್ಯಾಪ್ ಆಗಿರುವ ಮಾಹಿತಿ ವಿಚಾರಣೆ ವೇಳೆ ಲಭಿಸಿದೆ. ಈ ಮಾಹಿತಿಯನ್ನು ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೂ ನೀಡಿದ್ದಾರೆ ಎನ್ನಲಾಗಿದ್ದು, ಸ್ಯಾಂಡಲ್ ಸ್ಮಗ್ಲಿಂಗ್ ಸೇರಿದಂತೆ 20ಕ್ಕೂ ಹೆಚ್ಚು ಕೇಸಲ್ಲಿ ಭಾಗಿಯಾಗಿರುವ ವ್ಯಕ್ತಿಯ ಸಹಾಯ ಪಡೆಯಲಾಗಿತ್ತು. ಸ್ಯಾಂಡಲ್ ಸ್ಮಗ್ಲಿಂಗ್ ಕಳ್ಳನ ಗ್ಯಾಂಗ್ ಪತ್ತೆ ಹಚ್ಚುವ ನೆಪದಲ್ಲೇ ಟ್ಯಾಪಿಂಗ್ ನಡೆಸಲಾಗಿದೆ. ಶ್ರೀಗಳ ಫೋನ್ ಜೊತೆಗೆ ಮತ್ತಿಬ್ಬರ ಮೇಲೂ ಪೊಲೀಸರು ನಿಗಾ ವಹಿಸಿದ್ದರು. ನಿರ್ಮಲಾನಂದ ಶ್ರೀ ಜೊತೆ ಆಪ್ತರಾದ ಲಿಂಗೇಶ್, ರಮೇಶ್ ಅವರ ನಂಬರ್ ಗಳನ್ನು ಸರಿ ಸುಮಾರು 3 ತಿಂಗಳ ಕಾಲ ಟ್ಯಾಪ್ ಮಾಡಲಾಗಿತ್ತು ಎನ್ನಲಾಗಿದೆ.