ಬಾದಾಮಿ ಗ್ರೇವಿಯ ಚಿಕನ್ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಭರಿತ ಸಖತ್ ರುಚಿಯಾದ ಅಡುಗೆ. ಈ ರೆಸಿಪಿ ಆರೋಗ್ಯಕ್ಕೆ ಬೆಸ್ಟ್ ಆಗಿರೋದು ಮಾತ್ರವಲ್ಲದೇ ರುಚಿಯಲ್ಲೂ ಯಮ್ಮೀ ಫ್ಲೇವರ್ ಇದೆ. ರೋಟಿ ಅಥವಾ ಅನ್ನದೊಂದಿಗೆ ಸವಿಯಲು ಈ ಗ್ರೇವಿ ಬೆಸ್ಟ್ ಆಗಿದೆ. ಯಾವಾಗಲೂ ಒಂದೇ ರೀತಿಯಲ್ಲಿ ಚಿಕನ್ ಸಾರು ಇಲ್ಲವೇ ಗ್ರೇವಿ ಮಾಡಿ ಬೋರ್ ಎನಿಸಿದವರು ಟ್ರೈ ಮಾಡಲೇಬೇಕಾದ ರೆಸಿಪಿಯಿದು. ಹಾಗಿದ್ರೆ ಬಾದಾಮಿ ಗ್ರೇವಿಯ ಚಿಕನ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ – 500 ಗ್ರಾಂ
ಈರುಳ್ಳಿ – 3
ಟೊಮೆಟೋ – 1
ಬೆಳ್ಳುಳ್ಳಿ – 15
ದಾಲ್ಚಿನ್ನಿ ಚಕ್ಕೆ – ಒಂದು ಇಂಚು
ಕಲ್ಲಂಗಡಿ ಬೀಜಗಳು – ಅರ್ಧ ಕಪ್
ಬಿಳಿ ಎಳ್ಳು – 3 ಟೀಸ್ಪೂನ್
ಬಾದಾಮಿ – 20 (ಪೇಸ್ಟ್ನಂತೆ ರುಬ್ಬಿಡಿ)
ಏಲಕ್ಕಿ – 4
ಗೋಡಂಬಿ – 10
ತೆಂಗಿನ ಹಾಲು – 1 ಕಪ್
ತುಪ್ಪ ಅಥವಾ ಎಣ್ಣೆ – 3 ಚಮಚ
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಹಸಿರು ಮೆಣಸಿನಕಾಯಿ – 3
ಪುದೀನಾ – 5 ಎಳೆಗಳು
ಶುಂಠಿ – 1 ಇಂಚು
ಲವಂಗ – 5
ಕರಿಮೆಣಸು – 4
ಜೀರಿಗೆ 1 ಟೀಸ್ಪೂನ್
ದಾಲ್ಚಿನ್ನಿ ಎಲೆ – 1
ಸಕ್ಕರೆ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – 3 ಎಳೆಗಳು
ಮೊಸರು – ಅರ್ಧ ಕಪ್
ಕರಿಮೆಣಸಿನಪುಡಿ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಚಿಕನ್ ಕೀಮಾ ಬಿರಿಯಾನಿ – ವಾವ್ ಎನ್ನದೇ ಇರೋಕಾಗಲ್ಲ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅರಿಶಿನ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ, ಚಿಕನ್ ತುಂಡುಗಳಿಗೆ ಚೆನ್ನಾಗಿ ಉಜ್ಜಿ. ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸುಮಾರು 15-20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
* ಈಗ ಪ್ಯಾನ್‌ನಲ್ಲಿ 1 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಬಳಿಕ ರುಬ್ಬಿದ ಬಾದಾಮಿ, ಗೋಡಂಬಿ, ಎಳ್ಳು, ಕಲ್ಲಂಗಡಿ ಬೀಜಗಳು ಮತ್ತು ಏಲಕ್ಕಿ ಸೇರಿಸಿ ಕಡಿಮೆ ಉರಿಯಲ್ಲಿ 3 ನಿಮಿಷ ಮಿಶ್ರಣ ಮಾಡಿ.
* ಬಳಿಕ ತೆಂಗಿನ ಹಾಲು ಸೇರಿಸಿ ಮಿಶ್ರಣವು ಸ್ವಲ್ಪ ಕಂದು ಬಣ್ಣಕ್ಕೆ ಬಂದ ನಂತರ ಉರಿಯನ್ನು ಆಫ್ ಮಾಡಿ. ಅದನ್ನು ತಣ್ಣಗಾಗಲು ಬಿಟ್ಟು ಬಳಿಕ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
* ಈಗ ಮಿಕ್ಸರ್ ಜಾರ್‌ನಲ್ಲಿ ಹೆಚ್ಚಿದ ಟೊಮೆಟೋ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಪುದೀನ ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
* ಒಂದು ಪಾತ್ರೆ ತೆಗೆದುಕೊಂಡು 2 ಟೀಸ್ಪೂನ್ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ, ಬಿಸಿಯಾದ ನಂತರ ಜೀರಿಗೆ ಕಾಳುಮೆಣಸು, ದಾಲ್ಚಿನ್ನಿ, ಸಕ್ಕರೆ, ದಾಲ್ಚಿನ್ನಿ ಎಲೆ, ಲವಂಗ ಸೇರಿಸಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಹುರಿಯಿರಿ.
* ಈಗ ಬಿಳಿ ಪೇಸ್ಟ್ ಅನ್ನು ನಿಧಾನವಾಗಿ ಸೇರಿಸಿ, ಕಡಿಮೆ ಉರಿಯಲ್ಲಿ ಆಗಾಗ ಬೆರೆಸುತ್ತಿರಿ. ಸ್ಥಿರತೆ ನೋಡಿ ನೀರನ್ನು ಸೇರಿಸಬಹುದು. 2 ನಿಮಿಷಗಳ ನಂತರ ಅದಕ್ಕೆ ಹಸಿರು ಪೇಸ್ಟ್ ಅನ್ನು ಸೇರಿಸಿ 3 ನಿಮಿಷಗಳ ಕಾಲ ಕುದಿಸಿ.
* ಬಳಿಕ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಸೇರಿಸಿ. ಅಗತ್ಯವಿರುವಷ್ಟು ಉಪ್ಪು ಸೇರಿಸಿ, ಅಗತ್ಯವಿದ್ದರೆ ಯಾವುದೇ ಮಸಾಲೆಗಳನ್ನು ರುಚಿಗೆ ಅನುಸಾರವಾಗಿ ಬದಲಾಯಿಸಬಹುದು. ಹಾಗೂ ಚಿಕನ್ ಅನ್ನು 15-20 ನಿಮಿಷ ಬೇಯಲು ಬಿಡಿ.
* ಈ ವೇಳೆ ಮತ್ತೊಂದು ಪ್ಯಾನ್‌ನಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, 1 ಈರುಳ್ಳಿಯನ್ನು ತೆಳ್ಳಗೆ ಕತ್ತರಿಸಿ, ಅದಕ್ಕೆ ಸೇರಿಸಿ, ಗಾಢ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಈಗ ಚಿಕನ್ ಗ್ರೇವಿಗೆ ಹುರಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿಸೊಪ್ಪು ಸೇರಿಸಿ ಅಲಂಕರಿಸಿ.
* ಬಾದಾಮಿ ಗ್ರೇವಿಯ ಚಿಕನ್ ಇದೀಗ ತಯಾರಾಗಿದ್ದು, ರೋಟಿ ಅಥವಾ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?
Advertisement
Web Stories