ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಈ ಮಹಾಮಳೆಯಲ್ಲೂ ಕರಾವಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ.
ಕರಾವಳಿಯಲ್ಲಿ ಮಹಾಮಳೆ ಹಿನ್ನೆಲೆ ಜಿಲ್ಲಾಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಾಂಕೇತಿವಾಗಿ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಂಥಿಲ್ ಸೂಚಿಸಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ಸ್ವಾತಂತ್ರ ದಿನಾಚರಣೆ ನಡೆಯಲಿದ್ದು, ಭಾರೀ ಮಳೆ ಹಿನ್ನೆಲೆ ಕಾರ್ಯಕ್ರಮಕ್ಕೆ ಮಕ್ಕಳ ಹಾಜರಾತಿ ಬೇಡ, ಎನ್‍ಸಿಸಿ, ಪೊಲೀಸ್ ಪಥಸಂಚಲನ ಮಾತ್ರ ನಡೆಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ.
Advertisement
Advertisement
ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಭದ್ರಾನದಿ ಉಕ್ಕಿ ಹರಿಯುತಿದೆ, ಭದ್ರಾ ಬ್ರಿಡ್ಜ್‍ವರೆಗೂ ನೀರು ನುಗ್ಗಿದೆ. ಬ್ರಿಡ್ಜ್ ಕೆಳಗಿರುವ ಪೆಟ್ರೋಲ್ ಬಂಕ್‍ಗೂ ನೀರು ನುಗ್ಗಿ 5 ಸಾವಿರ ಲೀಟರ್ ಪೆಟ್ರೋಲ್ ನೀರುಪಾಲಾಗಿದ್ದು, ನೀರಿನೊಂದಿಗೆ ಪೆಟ್ರೋಲ್ ಹರೀತಿದೆ. ಕವಲಗುಂದಿ, ಕೋಟೆ, ಅಂಬೇಡ್ಕರ್ ನಗರ, ಗುಂಡೂರಾವ್, ಎಕಿನ್ ಷಾ ಕಾಲೋನಿ, ಸುಣ್ಣದಹಳ್ಳಿ ಬಡಾವಣೆ ಸೇರಿ ಒಟ್ಟು 250ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು ಆರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
Advertisement
Advertisement
ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳದಲ್ಲಿರಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಮಳೆಯ ತೀವ್ರತೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ವಿರಾಜಪೇಟೆ-ಮಡಿಕೇರಿ ನಡುವಿನ ಸಂಪರ್ಕಿಸಲು ಸೇತುವೆ ಮುಳುಗಡೆ ಹಂತದಲ್ಲಿದೆ. ನದಿ ದಡದ 50ಕ್ಕೂ ಹೆಚ್ಚಿನ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕರಡಿಗೋಡು ಸೇರಿದಂತೆ ತಗ್ಗು ಪ್ರದೇಶಗಳಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇರೋದ್ರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ.
ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯದಿಂದ ನದಿಗೆ 45 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದ್ದು, ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ತಗ್ಗು ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಮತ್ತು ಸಮಸ್ಯೆ ಎದುರಾಗುವ ಸನ್ನಿವೇಶ ಬಂದಲ್ಲಿ ಗಂಜಿಗಳ ಕೇಂದ್ರ ಕಡೆಗೆ ತ್ವರಿತವಾಗಿ ತೆರಳಲು ಸೂಚನೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಎಡೆಬಿಡೆದೆ ಮಳೆ ಸುರಿಯುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಹೀಗಾಗಿ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಸಮೀಪದ ಇರ್ಪು ಜಲಪಾತಕ್ಕೆ ತೆರಳದಂತೆ ಶ್ರೀಮಂಗಲ ವನ್ಯಜೀವಿ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಭಾರೀ ಮಳೆಯಾಗ್ತಿರೋದ್ರಿಂದ ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಮತ್ತು ಬಳ್ಳಾರಿ ಜಿಲ್ಲೆ ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಅಪಾಯದ ಮಟ್ಟ ಮೀರಿ ನೀರು ಹರಿದು ಬರುತ್ತಿದೆ. ಸೇತುವೆ ಮುಳುಗಡೆ ಆಗಲು ಇನ್ನೂ ಕೇವಲ ಅರ್ಧ ಅಡಿ ಅಷ್ಟೇ ಬಾಕಿ ಇದೆ. ಆದರೂ ಸಹ ಇಲ್ಲಿ ಯಾವುದೇ ಮುಂಜಾಗೃತೆ ಇಲ್ಲದೆ ಸೇತುವೆ ಮೇಲೆ ಬಾರಿ ವಾಹನಗಳ ಸಂಚಾರ ಇದೆ.
ವರುಣನ ಆರ್ಭಟಕ್ಕೆ ನೀರಿನಲ್ಲಿ ವ್ಯಕ್ತಿ ಕೊಚ್ಚಿಹೋದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರದ ಐರಬೈಲು ಗ್ರಾಮದಲ್ಲಿ ನಡೆದಿದೆ. ಶಂಕರ ಪೂಜಾರಿ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ, ಕೃಷಿ ಚಟುವಟಿಕೆಗೆ ತೆರಳಿದ್ದಾಗ, ಕಿರಿದಾದ ಕಾಲುವೆಯಲ್ಲಿ ಶಂಕರ್ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಬಂದ ಶಂಕರನಾರಾಯಣ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಶಂಕರ್‍ಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಇತ್ತ ಧಾರಾಕಾರ ಮಳೆಯಿಂದಾಗಿ ಶಿರಾಡಿಘಾಟ್‍ನಲ್ಲಿ ಸಂಚಾರ ದಟ್ಟಣೆ ಮುಂದುವರಿದಿತ್ತು. ಅಲ್ಲಲ್ಲಿ ಗುಡ್ಡ ಕುಸಿತಗೊಂಡಿದ್ದು, ವಾಹನ ಸವಾರರು ಪರದಾಡಿದರು. ಸತತ ಮೂರು ಗಂಟೆಗಳ ಕಾಲ ಟ್ರಾಫಿಕ್‍ಜಾಮ್‍ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಬೇಕಾಯಿತು. ಅಲ್ಲದೇ ವಾಹನ ಸಂಚಾರ ಸುಗಮಗೊಳಿಸಲು ಸ್ಥಳೀಯರು ಹಾಗೂ ಪ್ರಯಾಣಿಕರು ಹರಸಾಹಸಪಟ್ಟರು.
ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರಕ್ಕೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ. ಇನ್ನು ಮುಂದಿನ 24 ಗಂಟೆಯೊಳಗೆ ಕೆಆರ್‍ಎಸ್ ಜಲಾಶಯದಿಂದ 1,20,000 ರಿಂದ 1,50,000 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡುವ ಸಾಧ್ಯತೆ ಇದ್ದು, ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ ನೀಡಿದ್ದಾರೆ.
ಮಲೆನಾಡಿನ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ, ಭದ್ರಾ ಡ್ಯಾಂನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಭದ್ರಾ ಡ್ಯಾಂ ನಿಂದ 90 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಡ್ಯಾಂನ ವ್ಯಾಪ್ತಿಯ, ಸೋಂಪಾಪುರ, ಕರಕುಚಗಿ, ಕೆಸರುಕೊಪ್ಪ ಗ್ರಾಮದ ಅಡಿಕೆ ತೋಟ, ಗದ್ದೆಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ. ಇನ್ನು ಸ್ಥಳಕ್ಕೆ ಬಂದ ತರೀಕೆರೆ ಉಪವಿಭಾಗಾಧಿಕಾರಿ ರೂಪಾ, ತಹಶೀಲ್ದಾರ್ ಧಮೋಜಿರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕೇರಳದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಗೆ ಅಪಾಯದ ಮಟ್ಟ ಮೀರಿ ನದಿಗಳು ಹರಿಯುತ್ತಿದೆ. ಸರಣಿ ಭೂ ಕುಸಿತಗಳು ಕೇರಳಿಗರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ನಿನ್ನೆ ವಯನಾಡು, ಕಲ್ಲಿಕೋಟೆ, ಮಳಪ್ಪುರಂ, ಕಣ್ಣೂರು, ಕಾಸರಗೋಡಿನಲ್ಲಿ ಭೂಕುಸಿತ ಸಂಭವಿಸಿದ್ದು 144 ಗ್ರಾಮಗಳನ್ನು ಪ್ರವಾಹಪೀಡಿತ ಅಂತ ಘೋಷಿಸಲಾಗಿದೆ. ಧಾರಾಕಾರ ಮಳೆಯ ಹಿನ್ನೆಲೆ ಈ ಬಾರಿ ಓಣಂ ಆಚರಣೆಯನ್ನು ಸರ್ಕಾರ ರದ್ದುಗೊಳಿಸಿದ್ದು, ಓಣಂಗಾಗಿ ಮೀಸಲಿಟಿದ್ದ ಹಣವನ್ನು ಪರಿಹಾರ ಕಾರ್ಯಾಚರಣೆಗೆ ಬಳಸುವುದಾಗಿ ಸಿಎಂ ಪಿಣರಾಯ್ ವಿಜಯನ್ ಘೋಷಿಸಿದ್ದಾರೆ.
ಇಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಜ್ಯಪಾಲ ಸದಾಶಿವಂ ಏರ್ಪಡಿಸಿದ್ದ ಔತಣಕೂಟವನ್ನೂ ರದ್ದುಗೊಳಿಸಿದ್ದಾರೆ. ಮುಲ್ಲಪೆರಿಯಾರ್ ಡ್ಯಾಂನಲ್ಲಿ ನೀರಿನ ಮಟ್ಟ ತೀವ್ರ ಏರಿಕೆಯಾಗಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಗರಿಷ್ಠ ನೀರಿನ ಮಟ್ಟ 142 ಅಡಿ ಇದ್ದು ಈಗಾಗಲೇ 136.10 ಅಡಿ ತಲುಪಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.
ಉತ್ತರ ಭಾರತದಲ್ಲೂ ಭಾರೀ ಮಳೆಯಾಗುತ್ತಿದ್ದು ಜಮ್ಮುವಿನಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ನಾಲ್ವರು ಬಲಿಯಾಗಿದ್ದಾರೆ. 24ಕ್ಕೂ ಹೆಚ್ಚು ಮನೆಗಳು, ವಾಹನಗಳು ಹಾನಿಯಾಗಿವೆ. ಹಿಮಾಚಲ ಪ್ರದೇಶದಲ್ಲಿ 5 ವರ್ಷದ ಬಾಲಕ ನೀರಿನಲ್ಲಿ ಮುಳುಗಿದ್ದು ಮೃತರ ಸಂಖ್ಯೆ 2 ದಿನಗಳಲ್ಲಿ 19ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿ ಘಟನೆಗಳಿಂದ ನಾಲ್ವರು ಮೃತಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv