ಬೆಂಗಳೂರು: ಸರ್ಕಾರದ ಪತನದ ನಂತರ ಈಗ ಮೈತ್ರಿಯದ್ದೇ ದೊಡ್ಡ ತಲೆನೋವಾಗಿದೆ. ಸದ್ಯ ಕಾಂಗ್ರೆಸ್, ಜೆಡಿಎಸ್ಸಿನ ಕೆಲ ನಾಯಕರು ಮೈತ್ರಿ ಮುಂದುವರಿಸುವುದು ಬೇಡ ಎನ್ನುವ ನಿರ್ಧಾರದಲ್ಲಿದ್ದಾರೆ. ಆದರೆ ಈ ವಿಚಾರವನ್ನು ಅಧಿಕೃತವಾಗಿ ಹೇಳುವುದು ಹೇಗೆ ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ.
ಬುಧವಾರ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮೈತ್ರಿ ಮುಂದುವರಿಸುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ನಮಗೆ ಸೋಲಾಗಿದೆ ಎಂದು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೇವೇಗೌಡರು ಈ ವಿಚಾರದಲ್ಲಿ ಜಾಣ ನಡೆ ಇಟ್ಟಿದ್ದಾರೆ.
Advertisement
ದೇವೇಗೌಡರ ಈ ತಂತ್ರದ ಹಿಂದೆ ಎರಡು ಮರ್ಮ ಅಡಗಿದೆ. ಒಂದು ವೇಳೆ ನಾವೇ ಮೈತ್ರಿ ಮುರಿದುಕೊಂಡರೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡರು ಎನ್ನುವ ಸಂದೇಶ ರವಾನೆ ಆಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷದವರೇ ಮೈತ್ರಿ ಬಗ್ಗೆ ಅಂತಿಮ ತೀರ್ಮಾನ ಮಾಡಲಿ. ಅವರೇ ಬೇಡ ಎಂದರೆ ಜನರ ಅನುಕಂಪ ಗಿಟ್ಟಿಸಬಹುದು ಅನ್ನೋದು ದೇವೇಗೌಡರ ಲೆಕ್ಕಾಚಾರವಾಗಿದೆ.
Advertisement
Advertisement
ಇತ್ತ ಕಾಂಗ್ರೆಸ್ಸಿನಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿಂದೆಯೇ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಚಿಕ್ಕಬಳ್ಳಾಪುರ ಅಭ್ಯರ್ಥಿ ವೀರಪ್ಪ ಮೊಯ್ಲಿ ಮೈತ್ರಿ ಫಲಕಾರಿಯಾಗಿಲ್ಲ. ಇನ್ನು ಮುಂದೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರು ಈಗ ಗೊಂದಲಕ್ಕೆ ಸಿಕ್ಕಿಕೊಂಡಿದ್ದಾರೆ.
Advertisement
ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಾಗ ದೆಹಲಿಯ ಕೈ ನಾಯಕರು ಕುಮಾರಸ್ವಾಮಿ ಅವರ ಬಳಿ ಹೋಗಿ ಮೈತ್ರಿ ಮಾತುಕತೆಯ ಪ್ರಸ್ತಾಪ ಇಟ್ಟಿದ್ದರು. ಹೀಗಾಗಿ ಈಗ ನಾವಾಗಿಯೇ ಮೈತ್ರಿ ಬೇಡ ಎಂದು ಹೇಳಿದರೆ ತಪ್ಪು ಸಂದೇಶ ರವಾನೆಯಾಗಬಹುದು. ಈ ಮೈತ್ರಿ ಮುಂದುವರಿಯಬೇಕೋ? ಬೇಡವೋ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿ ಎನ್ನುವ ಅಭಿಪ್ರಾಯಕ್ಕೆ ರಾಜ್ಯ ನಾಯಕರು ಬಂದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಇಬ್ಬರು ಮೈತ್ರಿ ಮುಂದುವರಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಈಗ ಮೊದಲು ಈ ವಿಚಾರವನ್ನು ಬಹಿರಂಗವಾಗಿ ಯಾರು ಹೇಳುತ್ತಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.