ರಾಮನಗರ: ನಗರದ ಬಿಡದಿ ಸಮೀಪದಲ್ಲಿನ ಸ್ಮಶಾನ ಜಾಗವನ್ನು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಭೂಕಬಳಿಕೆ ಮಾಡಿರುವ ಆರೋಪ ಕೇಳಿ ಬಂದಿದೆ.
ಸರ್ಕಾರಿ ಜಮೀನನ್ನ ಖರೀದಿ ಮಾಡಿದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಇದೀಗ ಗೋಮಾಳದ ಜಮೀನನ್ನು ಕಬಳಿಕೆ ಮಾಡಿದ್ದಾರೆ. ಸ್ಮಶಾನಕ್ಕೆ ಸೇರಿದ 4 ಎಕರೆ 33 ಗುಂಟೆ ಜಮೀನನ್ನ ಫೆನ್ಸಿಂಗ್ ಹಾಕಿ ಡಿ.ಸಿ ತಮ್ಮಣ್ಣ ಕುಟುಂಬ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರ್‍ಟಿಐ ಕಾರ್ಯಕರ್ತ ಸಂಪತ್ ಆರೋಪಿಸಿದ್ದಾರೆ. ಬಿಡದಿ ಸ್ಮಶಾನಕ್ಕೆ ಸೇರಿದ ಜಮೀನನ್ನು ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement
ಏನಿದು ಪ್ರಕರಣ?
2006 ರಲ್ಲಿ ಬಿಡದಿ ಹಾಗೂ ಕೇತಿಗಾನಹಳ್ಳಿಯ ಸರ್ವೇ ನಂಬರ್ 10 ರಿಂದ 16 ರ ವರೆಗಿನ ಜಾಗವನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿತ್ತು. ಈ ವೇಳೆ ಹರಾಜು ಪ್ರಕ್ರಿಯೆಯನ್ನ ವಿರೋಧಿಸಿ ಆರ್ ಟಿಐ ಕಾರ್ಯಕರ್ತ ಸಂಪತ್ ಹೈ ಕೋರ್ಟ್ ಮೆಟ್ಟಿಲೇರಿ ಕೇತಿಗಾನಹಳ್ಳಿ ಹಾಗೂ ಬಿಡದಿಗೆ ಸರ್ವೇ ನಂಬರ್ 10 ರಲ್ಲಿನ 6 ಎಕರೆ 8 ಗುಂಟೆ ಗೋಮಾಳವನ್ನ ಸ್ಮಶಾನದ ಜಾಗವನ್ನಾಗಿ ನೀಡುವಂತೆ ಮನವಿ ಮಾಡಿದ್ರು. ಅದರಂತೆ ಹೈಕೋರ್ಟ್ ಸಹ 2011 ರಲ್ಲಿ ಕೇತಿಗಾನಹಳ್ಳಿಗೆ 2 ಎಕರೆ ಹಾಗೂ ಬಿಡದಿಗೆ 4 ಎಕರೆ 33 ಗುಂಟೆ ಜಾಗವನ್ನ ಸ್ಮಶಾನಕ್ಕೆ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿತ್ತು.
Advertisement
ಕೇತಿಗಾನಹಳ್ಳಿಗೆ ಸೇರಿದ 2 ಎಕರೆ ಸ್ಮಶಾನದ ಜಾಗದಲ್ಲಿ 1 ಎಕರೆ 15 ಗುಂಟೆ ಜಾಗವನ್ನ ಬೇನಾಮಿ ಹೆಸರಿನಲ್ಲಿ ಸಚಿವ ಡಿ.ಸಿ ತಮ್ಮಣ್ಣ ಕಬಳಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ನಂತರ ಸರ್ವೇ ಕಾರ್ಯ ನಡೆಸಿ 2 ಎಕರೆ ಜಾಗವನ್ನ ಕೇತಿಗಾನಹಳ್ಳಿ ಸ್ಮಶಾನಕ್ಕೆ ನೀಡಲಾಯ್ತು. ಇನ್ನೂ ಬಿಡದಿ ಸ್ಮಶಾನಕ್ಕೆ ಸೇರಿದ ಜಾಗವನ್ನ ತಂತಿಬೇಲಿ ಹಾಕಿ ಸಚಿವ ಡಿ.ಸಿ ತಮ್ಮಣ್ಣನವರ ಕುಟುಂಬದವರು ತಮ್ಮ ಅನುಭೋಗದಲ್ಲೇ ಇಟ್ಟುಕೊಂಡಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ.
Advertisement
ಒಟ್ಟಾರೆ ಸಿಎಂ ಎಚ್‍ಡಿಕೆಯವರ ಸಂಬಂಧಿ, ಮಾಜಿ ಪ್ರಧಾನಿಗಳ ಬೀಗರೆಂಬ ಕಾರಣಕ್ಕೆ ಅಧಿಕಾರಿಗಳು ಸಹ ಹೆದರಿ ಕೂತಿದ್ದಾರೆ. ಅಲ್ಲದೆ ಮೇಲಾಧಿಕಾರಿಗಳ, ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸ್ಮಶಾನದ ಜಾಗವನ್ನ ಬಿಡಿಸುವಂತಹ ಕೆಲಸಕ್ಕೆ ಕೈ ಹಾಕಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.