ಹುಬ್ಬಳ್ಳಿ: ಇಷ್ಟು ದಿನ ಪವಾಡ, ಭಕ್ತಿ, ದಾಸೋಹ, ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಚಿರಪರಿಚಿತವಾಗಿದ್ದು, ಸಿದ್ಧಾರೂಢ ಮಠದಲ್ಲಿ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಠದ ಪಾಕಶಾಲೆ ಮೇಲೆ ಅಳವಡಿಸಿದ ಸೋಲಾರ್ ಪ್ಯಾನೆಲ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ.
ಮಠದ ಪಾಕಶಾಲೆಯಲ್ಲಿ ಬಾಯ್ಲರ್‌ನಿಂದ ಅಡುಗೆ ಮಾಡಲಾಗುತ್ತಿತ್ತು. ಇದರಿಂದಾಗಿ ವಿದ್ಯುತ್ ಹೊರೆ ಸಹ ಮಠಕ್ಕೆ ಜಾಸ್ತಿಯಾಗುತ್ತಿತ್ತು. ಹೀಗಾಗಿ ಸೌರ ಶಕ್ತಿ ಬಳಸಿಕೊಂಡು ಅಡುಗೆ ತಯಾರಿಸಲು ನಿರ್ಧಾರ ಮಾಡಿದ ಆಡಳಿತ ಮಂಡಳಿ, ಸೋಲಾರ್ ಕಂಪನಿಗಳಿಗೆ ಟೆಂಡರ್ ಆಹ್ವಾನ ನೀಡಿತ್ತು. ಇದರಂತೆ ಬೆಳಗಾವಿ ಮೂಲದ ಯೂನಿಸನ್ ಎಂಬ ಕಂಪನಿ, ಒಟ್ಟು 57 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸುವುದಾಗಿ ಬಿಡ್ ಸಲ್ಲಿಸಿತ್ತು.
ನಂತರ ಆಡಳಿತ ಮಂಡಳಿ ಈ ಕಂಪನಿಗೆ ಗುತ್ತಿಗೆ ನೀಡಿತ್ತು. ಈಗ ಕಾಮಗಾರಿ ಮುಗಿದು ಉದ್ಘಾಟನೆ ಸಹ ಆಗಿತ್ತು. ಆದರೆ ಈ ಕಾಮಗಾರಿಯೇ ಅವ್ಯವಹಾರ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಜೊತೆಗೆ ಸದ್ಯ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಿ.ಡಿ.ಮಾಳಗಿಯವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಡಿ.ಡಿ.ಮಾಳಗಿ ಸ್ವಹಿತಾಸಕ್ತಿಯಿಂದ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದು, ಇದರಲ್ಲಿ ಅನಧಿಕೃತವಾಗಿ 52 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಧ್ವರಾಜ್ ಅವಕಾಶವಾದಿ ರಾಜಕಾರಣಿ, ಡಿಕೆಶಿ ನಿರೀಕ್ಷೆ ಹುಸಿಯಾಗಿದೆ: ಧ್ರುವನಾರಾಯಣ್
ಇನ್ನೂ ಅವ್ಯವಹಾರದ ಆರೋಪ ಕೇಳಿ ಬರುತ್ತಲೇ, ಏಕಾಏಕಿ ಅಧ್ಯಕ್ಷ ಸ್ಥಾನಕ್ಕೆ ಡಿ.ಡಿ.ಮಾಳಗಿ ಅವರು ರಾಜೀನಾಮೆ ನೀಡಿ ಆಸ್ಪತ್ರೆ ಸೇರಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸೋಲಾರ್ ಪ್ಯಾನೆಲ್ ಜೋಡಣೆಗೆ ಮುಖ್ಯ ಆಡಳಿತಾಧಿಕಾರಿಗಳ ಪತ್ರ ಸಂಖ್ಯೆ 1885/2018ರ ಪ್ರಕಾರ 57,90,000 ರೂ.ಗೆ ಟೆಂಡರ್ ನೀಡಿದ್ದು, ಏಳು ಕಂತುಗಳಲ್ಲಿ ಸುಮಾರು 52,50,000 ಹಣವನ್ನು ನೀಡಲಾಗಿದೆ. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮಗೆ ಅಪಮಾನ ಮಾಡಿದ ಎನ್‍ಸಿಪಿ ಕಾರ್ಯಕರ್ತರು
ಎಲ್ಲಾ ವ್ಯವಹಾರ ಚೆಕ್ ಮೂಲಕ ಮತ್ತು ಕಮಿಟಿ ಗಮನಕ್ಕೆ ತಂದು ನಡೆಸಲಾಗಿದೆ. ಇನ್ನೂ ಅನಾರೋಗ್ಯ ಕಾರಣಕ್ಕಾಗಿ ಡಿಡಿ ಮಾಳಗಿ ರಾಜಿನಾಮೆ ನೀಡಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ. ಆಡಳಿತ ಮಂಡಳಿಯ ಕಾರ್ಯವೈಖರಿಗೆ ಮಸಿ ಬಳಿಯಲು ಹುನ್ನಾರ ನಡೆಸುತ್ತಿದೆ ಎಂದು ಮಠದ ಪದಾಧಿಕಾರಿಗಳ ಸಮರ್ಥಿಸಿಕೊಂಡಿದ್ದಾರೆ.