ಹಾವೇರಿ: ದಲಿತ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮುಸ್ಲಿಂ ವ್ಯಕ್ತಿಯೊಬ್ಬ ಕಾಲ್ ಮಾಡಿ ಕಿರುಕುಳ ಕೊಟ್ಟ ಹಿನ್ನೆಲೆ ಯುವತಿ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಚಿಕ್ಕಮಲ್ಲೂರು ಗ್ರಾಮದ ಯುವತಿ ಶಿಲ್ಪಾ (22) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗಾವಿಯಲ್ಲಿ ಬಿಸಿಎ ವಿಧ್ಯಾಭ್ಯಾಸ ಮಾಡುತ್ತಿದ್ದ ತಾನಿದ್ದ ಹಾಸ್ಟೆಲ್‌ನಲ್ಲಿಯೇ ನೇಣಿಗೆ ಶರಣಾಗಿದ್ದಳು. ಪ್ರಾರಂಭದಲ್ಲಿ ಶಿಲ್ಲಾ ಆತ್ಮಹತ್ಯೆಗೆ ಕಾರಣ ತಿಳಿದುಬಂದಿರಲಿಲ್ಲ. ಆದರೆ ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಈಗ ಬಯಲಾಗಿದೆ. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಶಿಲ್ಪಾ ಶಿಗ್ಗಾಂವಿ ಪಟ್ಟಣದ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ನವೀನ್ ಶಿಗ್ಗಾಂವಿಯ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಫರ್ನಿಚರ್ ಅಂಗಡಿ ಮಾಲೀಕನೆ ರಂಜಾನ್ ನದಾಫ್. ಕೆಲ ದಿನಗಳ ಹಿಂದಷ್ಟೇ ನವೀನ್ ಮೇಲೆ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಿಟ್ಟಾಗಿದ್ದ ಅಂಗಡಿ ಮಾಲೀಕ ರಂಜಾನ್, ನವೀನ್ ಮೊಬೈಲ್ ಕಸಿದುಕೊಂಡಿದ್ದ. ಮೊಬೈಲ್ ನೋಡಿದಾಗ ನವೀನ್ ಶಿಲ್ಪಾ ಜೊತೆ ಚಾಟಿಂಗ್ ಮಾಡಿರೋದು ಗೊತ್ತಾಗಿದೆ. ನವೀನ್ ಮೊಬೈಲ್‌ನಲ್ಲಿದ್ದ ಶಿಲ್ಪಾ ನಂಬರ್ ತೆಗೆದುಕೊಂಡು ರಂಜಾನ್, ಆಕೆಗೆ ಕರೆ ಮಾಡಿ ಟಾರ್ಚರ್ ಮಾಡಿದ್ದ. ನವೀನ್ ನಿನಗೆ ದುಡ್ಡು ಕಳಿಸಿದ್ದಾನೆ. ನಿಮಗೆ ದುಡ್ಡು ಎಲ್ಲಿಂದ ಬಂತು? ನಮ್ಮ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿ ನವೀನ್ ನಿನಗೆ ಹಣ ಕಳಿಸಿದ್ದಾನೆ. ಇದನ್ನ ಬಹಿರಂಗ ಮಾಡ್ತೀನಿ. ನಿಮ್ ತಂದೆ ತಾಯಿಗೂ ಹೇಳ್ತೀನಿ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಫರ್ನಿಚರ್ ಅಂಗಡಿ ಮಾಲೀಕನನ್ನು ಬಂಧಿಸಲು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ನವೀನ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಯುವಕನ ಮನೆಯಲ್ಲಿ ಬಹಳ ಬಡತನ ಇತ್ತು. ಅವರ ತಾಯಿಗೆ ಔಷಧಿ ಕೊಡಿಸಬೇಕಿತ್ತು. ನವೀನ್‌ಗೆ ಅಂಗಡಿ ಮಾಲೀಕ ಸಂಬಳವನ್ನೇ ಕೊಟ್ಟಿಲ್ಲ. ಹೀಗಾಗಿ, ಅಂಗಡಿಯಲ್ಲಿ ಸ್ವಲ್ಪ ವಸ್ತು ಕಳ್ಳತನ ಮಾಡಿ ತಾಯಿಗೆ ಔಷಧಿ ಕೊಡಿಸಿದ್ದಾನೆ. ಅದಕ್ಕಾಗಿಯೇ ನವೀನ್‌ಗೆ ಹೊಡೆದು ರಂಜಾನ್ ಪೊಲೀಸ್ ಕಂಪ್ಲೆಂಟ್ ಮಾಡಿದ್ದಾನೆ. ಯುವಕನ ಮೊಬೈಲ್ ಕಸಿದುಕೊಂಡು ಅದರಲ್ಲಿ ಶಿಲ್ಪಾ ನಂಬರ್ ತಗೊಂಡು ಟಾರ್ಚರ್ ಮಾಡಿದ್ದಾನೆ. ಇದರಿಂದ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದಾಳೆ. ಆರೋಪಿಯನ್ನು ಬಂಧಿಸಿ ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.