ಮುಡಾ ಪ್ರಕರಣದಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೆಸರು – ಅಕ್ರಮವಾಗಿ ಭೂಪರಿವರ್ತನೆ ಆರೋಪ

Public TV
2 Min Read
g.kumar nayak

– ನಿವೃತ್ತ ಐಎಎಸ್‌ ಅಧಿಕಾರಿ ಅಧಿಕಾರಲ್ಲಿದ್ದಾಗ ತಪ್ಪು ಎಸಗಿದ್ರಾ?

ರಾಯಚೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಪ್ರಕರಣ ವಿಚಾರಣೆ ಹೈಕೋರ್ಟ್ ಮುಂದೂಡಿರುವುದರಿಂದ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೆ, ನ್ಯಾಯಾಲಯದಲ್ಲಿ ವಾದ-ಪ್ರತಿವಾದದ ವೇಳೆ ಹಗರಣದಲ್ಲಿ ರಾಯಚೂರಿನ ಹಾಲಿ ಸಂಸದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಹೆಸರು ಕೇಳಿಬಂದಿದೆ. ಇದರಿಂದ ಜಿ.ಕುಮಾರ್ ನಾಯಕ್‌ಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಇವೆ.

ಜಿ.ಕುಮಾರ ನಾಯಕ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ, ಇಲ್ಲದೇ ಇರೋ ಜಾಗಕ್ಕೆ ಬದಲಿ ಜಾಗ ನೀಡಿರುವ ಆರೋಪದಲ್ಲಿ ಭೂಪರಿವರ್ತನೆ ಮಾಡಿರುವ ಆರೋಪ ಕೇಳಿಬಂದಿದೆ. ಸಿಎಂ ಮೈದುನ ಮಲ್ಲಿಕಾರ್ಜುನ ಸ್ವಾಮಿ ಭೂ ಪರಿವರ್ತನೆಗೆ 2004 ರಲ್ಲಿ ಅರ್ಜಿ ಹಾಕುತ್ತಾರೆ. ಅಸ್ತಿತ್ವವೇ ಇಲ್ಲದ ಕೃಷಿ ಭೂಮಿಗೆ ಭೂ ಪರಿವರ್ತನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಜಿ.ಕುಮಾರ್ ನಾಯಕ್ ಆರೋಪವನ್ನ ತಳ್ಳಿ ಹಾಕಿದ್ದು, 20-25 ವರ್ಷಗಳ ಕೆಳಗೆ ನಡೆದಿದೆ ಅಂತಾ ಆರೋಪಿಸಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಎಕ್ಸಿಸ್ಟ್ ಇಲ್ಲದ ಭೂಮಿಗೆ ಪರಿವರ್ತನೆ, ಅನುಮೋದನೆ ಹೇಗೆ ಸಾಧ್ಯ? ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಸಂಬಂಧಿಕರು ಯಾರೂ ನನ್ನ ಬಳಿ ಈ ವಿಚಾರಗಳಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭೂಪರಿವರ್ತನೆ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳು ಮಾಡುವ ಸಾಮಾನ್ಯ ಪ್ರಕ್ರಿಯೆ. ನಾನು ಕೂಡ ಮಾಡಿರಬಹುದು. ಇದು ಇಂಥವರ ಜಮೀನು ಅಂತಲೂ ಆ ಸಂದರ್ಭದಲ್ಲಿ ನಮಗೆ ತಿಳಿದೂ ಇರುವುದಿಲ್ಲ. ನೋಟಿಫೈ ಮಾಡಿರುವ ಭೂಮಿಯನ್ನ ಅಕ್ವೈರ್ ಮಾಡಿ ಡಿನೋಟಿಫೈ ಮಾಡಿರುವಂತದ್ದು ಇದೆ. ಡಿನೋಟಿಫೈ ಆದರೆ ಭೂಮಿ ಎಲ್ಲಿ ಹೋಗುತ್ತೆ? ಅಲ್ಲೆ ಇರುತ್ತೆ. ಆ ಭೂಮಿಗೆ ಕನ್ವರ್ಷನ್ ಆಗಿರುವ ಸಾಧ್ಯತೆಗಳು ಇರಬಹುದು. ಅದರ ಪೂರ್ಣ ವಿವರ ನನಗಿಲ್ಲ ಎಂದಿದ್ದಾರೆ.

ಮೂರು ವರ್ಷ ಮೈಸೂರಿನಲ್ಲಿ ಡಿಸಿ ಯಾಗಿದ್ದೆ. ರೂಲ್ಸ್ ಪ್ರಕಾರ ಇದ್ದಿದ್ದರೆ ಮಾಡಿಕೊಡುತ್ತಿದ್ದೆ. ಇವರೊಬ್ಬರದ್ದೆ ಅಲ್ಲಾ ತುಂಬಾ ಜನರದ್ದು ಎನ್‌ಎ ಮಾಡಿದ್ದೇನೆ. ಮಲ್ಲಿಕಾರ್ಜುನ ಸ್ವಾಮಿ ಅನ್ನೋರು ನನಗೆ ಖಂಡಿತ ನೆನಪಿಲ್ಲ. ಇಲ್ಲದೆ ಇರುವ ಭೂಮಿಗೆ ಪರಿವರ್ತನೆ ಯಾರೂ ಕೊಡಲು ಸಾಧ್ಯವಿಲ್ಲ ಎಂದು ಕುಮಾರ್ ನಾಯಕ್ ಹೇಳಿದ್ದಾರೆ.

ನನ್ನ 35 ವರ್ಷದ ಸೇವಾವಧಿಯಲ್ಲಿ ಕಂಡ ಅತ್ಯಂತ ನಿಷ್ಠುರವಾದಿ ರಾಜಕಾರಣಿ ಎಂದು ಸಿದ್ದರಾಮಯ್ಯ ಅವರನ್ನು ಕುಮಾರ್‌ ನಾಯಕ್‌ ಬಣ್ಣಿಸಿದರು. ಆರೋಪವನ್ನು ಎದುರಿಸಲು ನಾವೂ ತಯಾರಿದ್ದೇವೆ. ಆದರೆ ಈಗ ಬಂದಿರುವ ಆರೋಪ ಖಂಡಿತಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article