ಯಾದಗಿರಿ: ಜಿಲ್ಲೆಯ ನಗನೂರು (Naganoor) ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆಯ್ಕೆಯಲ್ಲಿ ಅಕ್ರಮವಾಗಿರುವ ಶಂಕೆ ಮೂಡಿದೆ. ಚುನಾವಣಾಧಿಕಾರಿಯೇ ಹಾಕಿಸಿದ್ದ ಮತ ಅಸಿಂಧು ಆಗಿದ್ದು, ಮತ್ತೊಂದು ಬಣಕ್ಕೆ ಅನುಕೂಲ ಮಾಡಿಕೊಟ್ಟ ಆರೋಪ ಕೇಳಿಬಂದಿದೆ.
ಕಳೆದ 4 ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿಗೆ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಜಿಲ್ಲೆಯ ಕೆಲ ಪಂಚಾಯಿತಿಗಳಲ್ಲಿ ಚುನಾವಣೆ ಭಾರೀ ಜಿದ್ದಾಜಿದ್ದಿಗೆ ಕಾರಣ ಕೂಡಾ ಆಗಿತ್ತು. ಆದರೆ ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಚುನಾವಣಾ ಅಧಿಕಾರಿಯ ಮೋಸದಾಟಕ್ಕೆ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗಲಿಲ್ಲ ಎಂದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಕಳೆದ 4 ದಿನಗಳ ಹಿಂದೆ ಗ್ರಾಮ ಪಂಚಾಯಿತಿಗೆ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಜಿಲ್ಲೆಯ ಬಹುತೇಕ ಪಂಚಾಯಿತಿಗಳ ಚುನಾವಣೆ ಶಾಂತಿಯಿಂದ ನಡೆದಿದೆ. ಆದರೆ ನಗನೂರ ಪಂಚಾಯಿತಿ ಮಾತ್ರ ಗೊಂದಲದ ಗೂಡಾಗಿದೆ. ಇದರ ಮಧ್ಯೆ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಆದರೆ ಚುನಾವಣೆಯಲ್ಲಿ ಅಕ್ರಮ ಮತ್ತು ಮೋಸ ನಡೆದಿದೆ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ.
Advertisement
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಪಂಚಾಯಿತಿ ವ್ಯಾಪ್ತಿಯಲ್ಲಿ 19 ಜನ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಇದ್ದು ಸದಸ್ಯರಾದ ಶರಣರೆಡ್ಡಿ ಹಾಗೂ ಶಂಕರಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಶರಣರೆಡ್ಡಿ ಬೆಂಬಲಕ್ಕೆ 9 ಸದಸ್ಯರಿದ್ದರೆ ಶಂಕರಗೌಡ ಬೆಂಬಲಕ್ಕೆ 10 ಸದಸ್ಯರಿದ್ದರು ಎನ್ನಲಾಗಿದೆ. ಇದೆ ಆಗಸ್ಟ್ 4 ರಂದು ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳ ಪರ ತಲಾ 9 ಮತಗಳ ಚಲಾವಣೆ ಆಗಿದ್ದು 1 ಮತ ಮಾತ್ರ ಅಸಿಂಧು ಆಗಿದೆ.
Advertisement
ಮತದಾನದ ಮೂಲಕ ಚುನಾವಣೆ ಪ್ರಕ್ರಿಯೆ ನಡೆಸಲಾಗಿದ್ದು ಶಂಕರಗೌಡ ಪರ ಇದ್ದ ಸದಸ್ಯರ ಮತವನ್ನು ಚುನಾವಣಾ ಅಧಿಕಾರಿ ಮೂಲಕವೇ ಮತ ಚಲಾವಣೆ ಮಾಡಿಸಲಾಗಿದೆ. ಆದರೆ ಚುನಾವಣೆ ಅಧಿಕಾರಿ ನಿಷ್ಪಕ್ಷಪಾತವಾಗಿ ಮತದಾನ ಮಾಡುವ ಬದಲಿಗೆ 9 ಜನ ಸದಸ್ಯರ ಮತವನ್ನು ಸರಿಯಾದ ಕ್ರಮಕ್ಕೆ ಹಾಕಿ, 1 ಮತ ಮಾತ್ರ ಚುನಾವಣೆ ಅಧಿಕಾರಿ ಅಸಿಂಧು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಕ್ರಮವಾಗಿ ಅಧ್ಯಕ್ಷ ಆಯ್ಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ವಿದೇಶ ಪ್ರವಾಸ- ಕಾಂಬೋಡಿಯಾಗೆ ತೆರಳಿದ ಮಾಜಿ ಸಿಎಂ ಹೆಚ್‍ಡಿಕೆ
ಈ ಚುನಾವಣೆಯಲ್ಲಿ ಕೇವಲ ಚುನಾವಣಾ ಅಧಿಕಾರಿ ಮಾತ್ರ ಭಾಗವಹಿಸಬೇಕು. ಆದರೆ ಇಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹ ಕಾನೂನು ಬಾಹಿರವಾಗಿ ಭಾಗವಹಿಸಿ ಶರಣರೆಡ್ಡಿ ಪರ ಫಲಿತಾಂಶ ಬರುವ ಹಾಗೆ ಮಾಡಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಶಂಕರಗೌಡ ಆರೋಪಿಸಿದ್ದಾರೆ. 10 ಮತಗಳು ನನ್ನ ಪರವಾಗಿಯೇ ಇದ್ದರೂ ಚುನಾವಣಾ ಅಧಿಕಾರಿ ಮೋಸದ ಕೆಲಸ ಮಾಡಿ 1 ಮತ ಅಸಿಂಧು ಆಗುವ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಫಲಿತಾಂಶ ಹೊರ ಬಂದಾಗ ಗ್ರಾಮ ಪಂಚಾಯಿತಿ ಕಚೇರಿ ಬಳಿ ಗಲಾಟೆ ಕೂಡ ನಡೆದಿದೆ. ಗೊಂದಲ ಸೃಷ್ಟಿಯಾಗಿದ್ದರಿಂದ ಪೊಲೀಸರು ಸ್ಥಳಕ್ಕೆ ಬಂದು ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಆದರೆ ಇದು ಚುನಾವಣೆ ದಿನ ಮಾತ್ರ ನಡೆದ ಘಟನೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗುವ ದಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿಯೇ ಶರಣಗೌಡ ಬಣ ಇಬ್ಬರು ಸದಸ್ಯರನ್ನು ಕಿಡ್ನಾಪ್ ಮಾಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದ ಬಳಿಕ 4-5 ದಿನಗಳ ಬಳಿಕ ಕಿಡ್ನಾಪ್ ಆಗಿದ್ದ ಇಬ್ಬರನ್ನು ಪೊಲೀಸರು ವಾಪಸ್ ಕರೆದುಕೊಂಡು ಬಂದಿದ್ದರು.
ಈಗ ಚುನಾವಣೆ ಸಂದರ್ಭದಲ್ಲಿ ಅಕ್ರಮ ಎಸೆಗುವ ಮೂಲಕ ಶಂಕರಗೌಡ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಕಳೆದ 3 ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಒಗೆ ಪಿಡಿಒ ವಿರುದ್ಧ ದೂರು ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಮರು ಚುನಾವಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಸ್ಪಂದಿಸಿ ನ್ಯಾಯ ಕೊಡಿಸದಿದ್ದರೂ ಸಾಮೂಹಿಕವಾಗಿ 10 ಜನ ಸದಸ್ಯರು ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಂದು ಹೈಕಮಾಂಡ್ ನಾಯಕರ ಭೇಟಿಯಾಗಲಿರೋ ಬೊಮ್ಮಾಯಿ- ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಹುದ್ದೆ ಚರ್ಚೆ
ಒಟ್ಟಿನಲ್ಲಿ ನಗನೂರ ಪಂಚಾಯಿತಿ ಲೋಕಲ್ ಕದನ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದು ನಾನಾ ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಇದಕ್ಕೆ ಚುನಾವಣೆ ಪ್ರಕ್ರಿಯೆಗೆ ನೇಮಕವಾಗಿದ್ದ ಅಧಿಕಾರಿಗಳೇ ಕಾರಣ ಎನ್ನುವ ಗಂಭೀರ ಆರೋಪ ಇದೆ. ಹೀಗಾಗಿ ಮೇಲಾಧಿಕಾರಿಗಳು ಕೂಡಲೇ ಎಚ್ಚೆತ್ತು, ಪರಿಶೀಲನೆ ನಡೆಸುವ ಮೂಲಕ ಸತ್ಯಾಸತ್ಯತೆಯನ್ನು ಜನರ ಮುಂದಿಟ್ಟು, ಗೊಂದಲ ನಿವಾರಿಸಿ, ತೀರ್ಪು ನೀಡಬೇಕಿದೆ.
Web Stories