– ಸಹ ಕೈದಿಯ ಬೆತ್ತಲೆ ವಿಡಿಯೋ ಕಾಲ್ ಸ್ಕ್ರೀನ್‌ಶಾಟ್ ತೆಗೆದು ಬ್ಲ್ಯಾಕ್‌ಮೇಲ್
ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲಿನಿಂದ (Kalaburagi Jail) ಉಗ್ರಗಾಮಿಯೊಬ್ಬ ಇತರ ಕೈದಿಗಳನ್ನು ಹನಿಟ್ರ್ಯಾಪ್ (Honey Trap) ಖೆಡ್ಡಾಕ್ಕೆ ಕೆಡವಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಆಘಾತಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ (Malleswaram Blast Case) ಸಂಬಂಧಿಸಿದಂತೆ ಕಲಬುರಗಿ ಜೈಲಿನಲ್ಲಿರುವ ಉಗ್ರ ಜುಲ್ಫೀಕರ್ ಹಾಗೂ ಶಿವಮೊಗ್ಗದ (Shivamogga) ರೌಡಿ ಬಚ್ಚನ್ ಇಬ್ಬರೂ ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ತನ್ನ ಮನೆಯ ಸದಸ್ಯರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದ ಕೈದಿ ಸಾಗರ್, ಈ ಇಬ್ಬರೂ ಒಂದಾಗಿ ರಚಿಸಿದ ಹನಿಟ್ರ್ಯಾಪ್‌ಗೆ ಒಳಗಾಗಿರುವುದಾಗಿ ಸಹೋದರನೊಂದಿಗೆ ಮಾಹಿತಿ ಹಂಚಿಕೊಂಡಿದ್ದ. ಇದೀಗ ಈ ಆಡಿಯೋ ಸಂಭಾಷಣೆ ವೈರಲ್ ಆಗಿದೆ.
ಇಷ್ಟಕ್ಕೂ ಜುಲ್ಫೀಕರ್ ಮತ್ತು ಬಚ್ಚನ್ ಇತ್ತೀಚೆಗೆ ಸಾಗರ್‌ನನ್ನು ತಾವಿರುವ ಸೆಲ್‌ಗೆ ಕರೆದು ಮನೆಯ ಸದಸ್ಯರೊಂದಿಗೆ ಮಾತನಾಡುವುದಾದರೆ ವಿಡಿಯೋ ಕಾಲ್ ವ್ಯವಸ್ಥೆ ಮಾಡುವುದಾಗಿ ಹೇಳಿ ತಮ್ಮದೇ ಮೊಬೈಲ್ ಆತನಿಗೆ ನೀಡಿದ್ದಾರೆ ಎನ್ನಲಾಗಿದೆ. ತನ್ನ ತಾಯಿ ಮತ್ತು ಸಹೋದರನ ಜೊತೆ ಸಾಗರ್ ಮಾತನಾಡಿದ ಬಳಿಕ ಓರ್ವ ಅಪರಿಚಿತ ಮಹಿಳೆಯೊಂದಿಗೆ ಮಾತನಾಡಿದರೆ ಆಕೆ ಬೆತ್ತಲೆಯಾಗಿ ನಿನ್ನೊಂದಿಗೆ ಮಾತನಾಡುವುದಾಗಿ ನಂಬಿಸಿದ್ದಾರೆ. ಈ ವೇಳೆ ಸಾಗರ್ ಸಹ ಬೆತ್ತಲೆಯಾಗಿಯೇ ಮಾತನಾಡುವಂತೆ ಪುಸಲಾಯಿಸಿ ಬಳಿಕ ಅವರಿಬ್ಬರ ಮಧ್ಯದ ಸಂಭಾಷಣೆಯ ದೃಶ್ಯಾವಳಿ ಸ್ಕ್ರೀನ್ ಶಾಟ್ ಮಾಡಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ವಿಚಾರವನ್ನು ತನ್ನ ಸಹೋದರನ ಜೊತೆ ಸಾಗರ್ ಹಂಚಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಬೆತ್ತಲೆಯಾಗಿ ನಡೆದ ವಿಡಿಯೊ ಸಂಭಾಷಣೆ ಸ್ಕ್ರೀನ್ ಶಾಟ್ ಮಾಡಿಕೊಂಡಿರುವ ಕುರಿತು ಸಾಗರ್‌ಗೆ ತೋರಿಸಿ ಆತನ ಬಳಿ 50,000 ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಹಣದ ವ್ಯವಸ್ಥೆ ಮಾಡದೆ ಹೋದರೆ ಬೆತ್ತಲೆಯಾಗಿ ಮಹಿಳೆಯೊಂದಿಗೆ ಮಾತನಾಡಿರುವ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತನ್ನ ಸಹೋದರನೊಂದಿಗೆ ಚರ್ಚಿಸಿದ ವೇಳೆ ಸಾಗರ್ ಉಲ್ಲೇಖಿಸಿದ್ದಾನೆ.
ಜುಲ್ಫೀಕರ್ ಮತ್ತು ಬಚ್ಚನ್ ಜೋಡಿ ಸಹ ಕೈದಿಗಳಷ್ಟೇ ಅಲ್ಲ, ಜೈಲಿನ ಕೆಲವು ಸಿಬ್ಬಂದಿಗೂ ಇದೇ ವಿಡಿಯೊ ತುಣುಕು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾರಾಗೃಹ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಬೇಕಿದೆ.