– 1998 ರಲ್ಲಿ ಭಾರತ – ರಷ್ಯಾ ಜಂಟಿ ಹೂಡಿಕೆಯಲ್ಲಿ ಕಂಪನಿ ಆರಂಭ
– ಪಾಕ್ ಉಗ್ರರ ನೆಲೆಗಳ ಮೇಲೆ ನಿಖರ ದಾಳಿ
ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಬಳಿಕ ಭಾರತ (India) ಮತ್ತು ರಷ್ಯಾ (Russia) ಜಂಟಿಯಾಗಿ ಉತ್ಪಾದನೆ ಮಾಡಿದ ಬ್ರಹ್ಮೋಸ್ ಕ್ಷಿಪಣಿ (BrahMos Missile) ಖರೀದಿಗೆ ಹಲವು ದೇಶಗಳು ಈಗ ಆಸಕ್ತಿ ತೋರಿಸಿವೆ.
ಹಲವು ದೇಶಗಳು ಕ್ಷಿಪಣಿ ಖರೀದಿಗೆ ಆಸಕ್ತಿ ತೋರಿಸಲು ಕಾರಣವೂ ಇದೆ. ಬ್ರಹ್ಮೋಸ್ ಚೀನಾದ HQ-9 ವಾಯು ರಕ್ಷಣಾ ವ್ಯವಸ್ಥೆಗೂ ಕಾಣದಂತೆ ಪಾಕ್ ಒಳಗಡೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಕಡಿಮೆ ಬೆಲೆಯಲ್ಲಿ ನಿಖರ ದಾಳಿ ನಡೆಸಿದ್ದಕ್ಕೆ ಈಗ ಸುಮಾರು 18 ದೇಶಗಳು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಆಸಕ್ತಿ ತೋರಿಸಿವೆ.
250 ಮಿಲಿಯನ್ ಡಾಲರ್ (ಇಂದಿನ ಮೌಲ್ಯದಲ್ಲಿ ಹೇಳುವುದಾದರೆ 2,135 ಕೋಟಿ ರೂ.) ಹೂಡಿಕೆಯೊಂದಿಗೆ 1998ರಲ್ಲಿ ಬ್ರಹ್ಮೋಸ್ ಕ್ಷಿಪಣಿ ತಯಾರಿಸುವ ಕಂಪನಿ ಆರಂಭವಾಯಿತು. ಬ್ರಹ್ಮೋಸ್ ಕ್ಷಿಪಣಿಯ ಅಭಿವೃದ್ಧಿಯ ವೆಚ್ಚ ಅಧಿಕೃತವಾಗಿ ಎಲ್ಲಿಯೂ ಪ್ರಕಟವಾಗಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಬ್ರಹ್ಮೋಸ್ ಉತ್ಪಾದನಾ ಘಟಕವನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ.ವೆಚ್ಚ ಆಗಲಿದ್ದು ಪ್ರತಿ ಕ್ಷಿಪಣಿಗೆ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 34 ಕೋಟಿ ರೂ. ವೆಚ್ಚವಾಗುತ್ತದೆ ಎಂದು ವರದಿಯಾಗಿದೆ.
ವೇಗ ಎಷ್ಟು?
ಎಷ್ಟು ವೇಗದಲ್ಲಿ ಹೋಗುತ್ತದೆ ಅಂದರೆ ಮ್ಯಾಕ್ 2.8 ರಿಂದ ಮ್ಯಾಕ್ 3.5 ವೇಗದಲ್ಲಿ ಸಂಚರಿಸುತ್ತದೆ. ಕ್ಷಿಪಣಿಗಳು ಶಬ್ದದ ವೇಗಕ್ಕಿಂತಲೂ ವೇಗವಾಗಿ ಹೋಗುವುದರಿಂದ ಅದರ ವೇಗವನ್ನು ಅಳೆಯಲು ಮ್ಯಾಕ್ ಸಂಖ್ಯೆಗಳನ್ನು ಬಳಸಲಾಗುತ್ತದೆ. ಶಬ್ಧದ ವೇಗ ಗಂಟೆಗೆ 1,234 ಕಿ.ಮೀ. ಅಂದರೆ ಬ್ರಹ್ಮೋಸ್ ಕ್ಷಿಪಣಿ ಗಂಟೆಗೆ 3,455 ಕಿ.ಮೀಗಿಂತಲೂ ಹೆಚ್ಚು ವೇಗದಲ್ಲಿ ಸಂಚರಿಸಿ ನೆಲೆಗಳನ್ನು ಧ್ವಂಸ ಮಾಡುತ್ತದೆ. ಇದನ್ನೂ ಓದಿ: ಪಾಕ್ ವಿರುದ್ಧ ‘ಬ್ರಹ್ಮೋಸ್’ ಪರಾಕ್ರಮ – ಬ್ರಹ್ಮೋಸ್ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ
ಬ್ರಹ್ಮೋಸ್ ಅಭಿವೃದ್ಧಿಯಾಗಿದ್ದು ಹೇಗೆ?
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ (India) ಶಾಂತಿ ಮಂತ್ರವನ್ನು ಅನುಸರಿಸಿದರೂ ಪಾಕಿಸ್ತಾನ ಮತ್ತು ಚೀನಾದ (China) ಮಧ್ಯೆ ಯುದ್ಧ ನಡೆಸಬೇಕಾಯಿತು. 1947, 1965, 1971 ರಲ್ಲಿ ಪಾಕಿಸ್ತಾನದ ಜೊತೆ 1962 ರಲ್ಲಿ ಚೀನಾದ ಜೊತೆ ಯುದ್ಧ ಮಾಡಬೇಕಾಯಿತು. ಪಾಕಿಸ್ತಾನ ಜೊತೆಗಿನ ಮೂರು ಯುದ್ಧದಲ್ಲಿ ಭಾರತ ಗೆದ್ದರೆ ಚೀನಾದ ವಿರುದ್ಧ ಭಾರತ ಸೋತಿತ್ತು. ಗಡಿಯಲ್ಲಿರುವ ಈ ದೇಶಗಳ ಕಿರಿಕಿರಿ ಜಾಸ್ತಿ ಆಗುತ್ತಿದ್ದಂತೆ ಭಾರತ ಸರ್ಕಾರ ರಕ್ಷಣೆಗೆ ಹೆಚ್ಚು ಒತ್ತು ನೀಡಲು ಆರಂಭಿಸಿತು. ಅಷ್ಟೇ ಅಲ್ಲದೇ ಸ್ವಂತ ಕ್ಷಿಪಣಿ ಅಭಿವೃದ್ಧಿ ಪಡಿಸಲು ಮುಂದಾಯಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ ಡಿಆರ್‌ಡಿಒ ವಿಜ್ಞಾನಿಗಳು 1989ರಲ್ಲಿ ಅಗ್ನಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು. ಈ ಸಂದರ್ಭದಲ್ಲಿ ಧ್ವನಿಗಿಂತ ವೇಗವಾಗಿ ಸಂಚರಿಸುವ ಸೂಪರ್ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲು ಭಾರತ ಮುಂದಾಯಿತು. ಆದರೆ ಅದಕ್ಕೆ ಬೇಕಾದ ತಂತ್ರಜ್ಞಾನ ಭಾರತದ ಬಳಿ ಇರಲಿಲ್ಲ.
ಅಣುಬಾಂಬ್ ಪರೀಕ್ಷೆ ಮಾಡಿದ ಬಳಿಕ ಅಮೆರಿಕ ಭಾರತದ ಮೇಲೆ ಹಲವು ದಿಗ್ಭಂಧನ ವಿಧಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾದ ಸಂಬಂಧ ಚೆನ್ನಾಗಿತ್ತು. ಕೊನೆಗೆ ಭಾರತ ಮತ್ತು ರಷ್ಯಾದ ಜಂಟಿ ಹೂಡಿಕೆಯಲ್ಲಿ ಬ್ರಹ್ಮೋಸ್ ಕಂಪನಿ 1998ರಲ್ಲಿ ಸ್ಥಾಪನೆಯಾಯಿತು.
ಕ್ಷಿಪಣಿ ಮನುಷ್ಯ ಅಬ್ಧುಲ್ ಕಲಾಂ ಮತ್ತು ರಷ್ಯಾದ ರಕ್ಷಣಾ ಸಚಿವ ಮಿಖಾಲಿವೋ ಫೆಬ್ರವರಿ 12 ರಂದು ಮಾಸ್ಕೋದಲ್ಲಿ ಸಹಿ ಹಾಕಿದರು. ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPOM ನಡುವಿನ ಜಂಟಿ ಉದ್ಯಮವಾಗಿದೆ. ʼಬ್ರಹ್ಮಪುತ್ರʼ ಮತ್ತು ರಷ್ಯಾದ ʼಮಾಸ್ಕೋವಾʼ ನದಿಗಳನ್ನು ಪ್ರತಿನಿಧಿಸಲು ಈ ಕ್ಷಿಪಣಿಗೆ ಬ್ರಹ್ಮೋಸ್ ಎಂದು ಹೆಸರನ್ನು ಇಡಲಾಯಿತು. 250 ಮಿಲಿಯನ್ ಡಾಲರ್ ಹೂಡಿಕೆಯ ಕಂಪನಿಯಲ್ಲಿ ಭಾರತದ ಪಾಲು 50.5% ಇದ್ದರೆ ರಷ್ಯಾದ ಪಾಲು 49.5% ಇದೆ.
ಬ್ರಹ್ಮೋಸ್ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ. ಇದನ್ನೂ ಓದಿ: ಪಾಕ್, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!
ಕ್ರೂಸ್ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.
ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಈ ಕಾರಣಕ್ಕೆ ಬ್ರಹ್ಮೋಸ್ ಚೀನಾದ ವಾಯು ರಕ್ಷಣಾ ವ್ಯವಸ್ಥೆಗೂ ಸಿಗದಂತೆ ಯಶಸ್ವಿಯಾಗಿ ಒಳನಗ್ಗಿ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು 2001ರ ಜೂನ್ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ. 300 ಕೆಜಿ ಸಿಡಿತಲೆಯನ್ನು ಹೊತ್ತುಕೊಂಡು 300 ಕಿ.ಮೀ ದೂರದವರೆಗಿನ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ.