ಭಾರತದಲ್ಲಿ ತಯಾರಾಗಲಿದೆ ಎಕೆ-203 ರೈಫಲ್? ವಿಶೇಷತೆ ಏನು? ಅಗತ್ಯ ಏನು? – ಇಲ್ಲಿದೆ ಪೂರ್ಣ ಮಾಹಿತಿ

Public TV
4 Min Read
AK 203 MODI MAIN

ಪ್ರಧಾನಿ ನರೇಂದ್ರ ಮೋದಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿಯಲ್ಲಿ ಎಕೆ 203 ರೈಫಲ್ ಉತ್ಪಾದನೆ ಮಾಡುವ ಫ್ಯಾಕ್ಟರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಭಾರತೀಯ ಸೇನೆಗೆ ಈ ಅತ್ಯಾಧುನಿಕ ರೈಫಲ್ ಅಗತ್ಯವಾಗಿದ್ದು, ಈ ರೈಫಲ್ ವಿಶೇಷತೆ ಏನು? ಭಾರತೀಯ ಸೇನೆ ಯಾವೆಲ್ಲ ರೈಫಲ್ ಗಳನ್ನು ಬಳಕೆ ಮಾಡುತ್ತಿದೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಯಾಕೆ ಎಕೆ – 203 ಬೇಕು?
ಭಾರತೀಯ ಸೇನೆ ವಿಶ್ವದಲ್ಲೇ 5ನೇ ಸ್ಥಾನವನ್ನು ಹೊಂದಿದ್ದು, ಪ್ರಸ್ತುತ ನಮ್ಮ ಸೈನಿಕರು ಇಂಡಿಯಾ ಸ್ಮಾಲ್ ಆರ್ಮ್ಸ್ ಸಿಸ್ಟಂ(ಐಎನ್‍ಎಎಸ್- ಇನ್ಸಾಸ್) ರೈಫಲ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಸೈನಿಕರು ಇನ್ಸಾಸ್ ಬಳಕೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಜಾಮ್ ಆಗುವುದು, ಮೂರು ಸುತ್ತಿನ ಗುಂಡು ಆದ ಕೂಡಲೇ ಆಟೋಮ್ಯಾಟಿಕ್ ಮೋಡ್ ಗೆ ಹೋಗುವುದು, ದೀರ್ಘ ಕಾರ್ಯಾಚರಣೆಯ ವೇಳೆ ಇನ್ಸಾನ್ ನಲ್ಲಿ ಆಯಿಲ್ ಸೋರಿಕೆ ಆಗುತ್ತಿರುತ್ತದೆ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕನಿಷ್ಠ ಉಷ್ಣಾಂಶದ ವೇಳೆ ವೈರಿ ಜೊತೆ ಕಾದಾಡುತ್ತಿದ್ದಾಗ ಈ ರೈಫಲ್ ಗಳ ಮ್ಯಾಗಜಿನ್ ಗಳು ಆಗಾಗ ಜ್ಯಾಮ್ ಆಗುತಿತ್ತು. ಪದೇ ಪದೇ ಕೈಕೊಟ್ಟು ಸೈನಿಕರ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದ ಕಾರಣ ಸರ್ಕಾರ ಈಗ ಸ್ವದೇಶಿ ನಿರ್ಮಿತ ಇನ್ಸಾಸ್ ರೈಫಲ್ ಗಳಿಗೆ ತಿಲಾಂಜಲಿ ನೀಡಿ ಎಕೆ – 203 ರೈಫಲ್ ನೀಡಲು ಮುಂದಾಗಿದೆ. ಈ ಕಾರಣದ ಜೊತೆಗೆ ಉಗ್ರರು ಮತ್ತು ನಕ್ಸಲರು ಎಕೆ 47 ಗನ್ ಗಳನ್ನು ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ರಷ್ಯಾ ಕಂಪನಿಯ ಜೊತೆಗೂಡಿ ದೇಶದಲ್ಲೇ ಎಕೆ ರೈಫಲ್ ಗಳನ್ನು ಉತ್ಪಾದಿಸಲು ಮುಂದಾಗಿದೆ.

AK 203 2 e1551683497260

ಇನ್ಸಾಸ್ ವರ್ಸಸ್ ಎಕೆ 203:
ಇನ್ಸಾಸ್ 400 ಮೀಟರ್ ವ್ಯಾಪ್ತಿಯ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಮ್ಯಾಗಜಿನ್ ನಲ್ಲಿ 20 ಗುಂಡುಗಳನ್ನು ಹಾಕಬಹುದಾಗಿದೆ. ಇನ್ಸಾಸ್ ಉದ್ದವಾಗಿದ್ದು 4.15 ಕೆಜಿ ತೂಕವಿದ್ದು ಸುಲಭವಾಗಿ ಎತ್ತಿಕೊಂಡು ಹೋಗಲು ಸಾಧ್ಯವಿಲ್ಲ. ಎಕೆ – 203 ಎಕೆ -47 ಉನ್ನತೀಕರಿಸಿದ ಆವೃತ್ತಿಯಾಗಿದ್ದು, ಮ್ಯಾಗಜಿನ್ ನಲ್ಲಿ 30 ಗುಂಡುಗಳನ್ನು ಹಾಕಬಹುದಾಗಿದೆ. 800 ಮೀಟರ್ ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. ಇದರ ಮ್ಯಾಗಜಿನ್ ನಲ್ಲಿ 30 ಬುಲೆಟ್ ಗಳನ್ನು ಹಾಕಬಹುದು. ಒಂದು ನಿಮಿಷಕ್ಕೆ 600 ಬುಲೆಟ್ ಗಳನ್ನು ಫೈರ್ ಮಾಡುವ ಸಾಮರ್ಥ್ಯ ಹೊಂದಿರುವುದು ಇದರ ವಿಶೇಷ. ಅಂದರೆ ಒಂದು ಸೆಕೆಂಡಿಗೆ 10 ಬುಲೆಟ್ ಫೈರ್ ಮಾಡಬಹುದು. ಅಟೋಮ್ಯಾಟಿಕ್ ಮೋಡ್ ಮತ್ತು ಸೆಮಿ ಅಟೋಮ್ಯಾಟಿಕ್ ಮೋಡ್ ಗೆ ಹಾಕಿ ಬುಲೆಟ್ ಫೈರ್ ಮಾಡಬಹುದು. ಅಷ್ಟೇ ಅಲ್ಲದೇ ಈ ಗನ್ ಜಾಮ್ ಆಗುವುದಿಲ್ಲ. ಎಕೆ ನಿರ್ಮಿತ ಗನ್ ಗಳು ಎಲ್ಲ ರೀತಿಯ ಹವಾಮಾನದಲ್ಲೂ ಕೆಲಸ ಮಾಡುತ್ತದೆ. ಮಣ್ಣು, ಮರುಭೂಮಿ, ನೀರಿನಲ್ಲೂ ಕೆಲಸ ಮಾಡುತ್ತದೆ.

AK 203 1 e1551683540833

ಯಾವೆಲ್ಲ ದೇಶಗಳು ಎಕೆ 47 ಬಳಸುತ್ತಿವೆ?
50ಕ್ಕೂ ಹೆಚ್ಚು ದೇಶಗಳು ಎಕೆ 47 ಗನ್ ಗಳನ್ನು ಬಳಕೆ ಮಾಡುತ್ತಿವೆ. 30ಕ್ಕೂ ಹೆಚ್ಚು ದೇಶಗಳು ರಷ್ಯಾದ ಈ ಕಲಾಶ್ನಿಕೋವ್ ರೈಫಲ್ ಉತ್ಪಾದನೆ ಮಾಡಲು ಲೈಸನ್ಸ್ ಪಡೆದುಕೊಂಡಿದೆ. ರಷ್ಯಾದ ವಿಶೇಷ ಮಿಲಿಟರಿ ಪಡೆಗಳು ಈಗ ಎಕೆ 203 ರೈಫಲ್ ಬಳಸುತ್ತಿವೆ.

ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ನಿರ್ಮಾಣ:
ಕಳೆದ 10 ವರ್ಷಗಳಿಂದ ಸರ್ಕಾರ ಸೈನಿಕರಿಗೆ ಹೊಸ ರೈಫಲ್ ನೀಡಲು ಸಿದ್ಧತೆ ನಡೆಸಿತ್ತು. ಆದರೆ ಟೆಂಡರ್ ಸೇರಿದಂತೆ ಕೆಲ ಸಮಸ್ಯೆಗಳಿಂದಾಗಿ ರೈಫಲ್ ಖರೀದಿ ಪ್ರಕ್ರಿಯೆ ಅಂತಿಮವಾಗಿರಲಿಲ್ಲ. ಭಾರತ ರಷ್ಯಾದ ಜೊತೆಗೆ 5.43 ಶತಕೋಟಿ ಡಾಲರ್ ವೆಚ್ಚದ ಟ್ರಯಂಫ್ ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿಸಲು ನಡೆಸಿದ ಒಪ್ಪಂದದ ನಂತರ ಭಾರತ ರಷ್ಯಾ ಜೊತೆಗೂಡಿ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಎಕೆ-203 ರೈಫಲ್ ಉತ್ಪಾದನೆ ಸಂಬಂಧ ಜಂಟಿ ಉದ್ಯಮ ಸ್ಥಾಪನೆಯಾಯಿತು. ಒಟ್ಟು ಶೇ.50.5 ಶೇರನ್ನು ಭಾರತದ ಜೆವಿ ಕಂಪನಿ ಹೊಂದಿದ್ದರೆ ಶೇ.49.5 ಪಾಲನ್ನು ಕಲಾಶ್ನಿಕೋವ್ ಕನ್ಸರ್ನ್ ಹೊಂದಿದೆ. ಕಳೆದ ಅಕ್ಟೋಬರ್ ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ ಭಾರತದಲ್ಲಿ ಎಕೆ ರೈಫಲ್ಸ್ ಉತ್ಪಾದನೆ ಸಂಬಂಧ ಒಪ್ಪಂದಕ್ಕೆ ಜಂಟಿಯಾಗಿ ಸಹಿ ಹಾಕಿದ್ದರು. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

modi putin

ಭಾರತದಲ್ಲಿ ಯಾವೆಲ್ಲ ರೈಫಲ್ ಬಳಕೆಯಾಗುತ್ತಿದೆ?
ಸೈನಿಕರು ಇನ್ಸಾಸ್ ಗನ್ ಗಳನ್ನು ಬಳಕೆ ಮಾಡುತ್ತಿದ್ದರೆ, ಉಗ್ರರ ದಾಳಿ ಹೆಚ್ಚಿರುವ ಪ್ರದೇಶದಲ್ಲಿ  ಸಿಆರ್‌ಪಿಎಫ್ ಯೋಧರು ಆಮದಾಗಿರುವ ಎಕೆ 47 ಗನ್ ಬಳಕೆ ಮಾಡುತ್ತಿದ್ದಾರೆ. ಪ್ಯಾರಾ ಕಮಾಂಡೋಗಳು, ಗರುಡಾ ಕಮಾಂಡೋ ಫೋರ್ಸ್(ಐಎಎಫ್), ಮರೀನ್ ಕಮಾಂಡೋಗಳು, ರಾಷ್ಟ್ರೀಯ ಭದ್ರತಾ ದಳ(ಎನ್‍ಎಸ್‍ಜಿ) ಜರ್ಮನ್ ಮತ್ತು ಇಸ್ರೇಲ್ ನಿರ್ಮಿತ ಅಟೋಮ್ಯಾಟಿಕ್ ರೈಫಲ್ ಹೆಕ್ಲರ್ ಕೋಚ್, ಎಂಪಿ5 ಸಬ್ ಮಶೀನ್ ಗನ್, ತಾವೂರ್ ರೈಫಲ್ ಗಳನ್ನು ಬಳಕೆ ಮಾಡುತ್ತಿದೆ. ವಿಐಪಿ, ವಿವಿಐಪಿಗಳಿಗೆ ನೀಡುವ ಎಸ್‍ಪಿಜಿ ಬೆಲ್ಜಿಯಂ ನಿರ್ಮಿತ ಎಫ್‍ಎನ್ 2000 ಬುಲ್‍ಪಪ್ ಅಸಾಲ್ಟ್ ರೈಫಲ್ ಬಳಕೆ ಮಾಡುತ್ತಿವೆ.

ak 203 factory

ಎಷ್ಟು ರೈಫಲ್ ಉತ್ಪಾದನೆಯಾಗಲಿದೆ?
ಸ್ವದೇಶಿ ಇನ್ಸಾಸ್ ರೈಫಲ್ ತಮಿಳುನಾಡಿನ ತಿರುಚನಾಪಳ್ಳಿ, ಉತ್ತರಪ್ರದೇಶದ ಕಾನ್ಪುರ, ಪಶ್ಚಿಮ ಬಂಗಾಳದ ಇಚಾಪುರ್‍ನಲ್ಲಿ ತಯಾರಾಗುತಿತ್ತು. ಅಮೇಠಿಯಲ್ಲಿ ಒಟ್ಟು 7.50 ಲಕ್ಷ ಎಕೆ-203 ಗನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆರಂಭದಲ್ಲಿ ಎಲ್ಲ ಸೈನಿಕರಿಗೆ ಈ ರೈಫಲ್ ನೀಡಿದರೆ ನಂತರ ಪ್ಯಾರಾಮಿಲಿಟರಿ ಮತ್ತು ಪೊಲೀಸರಿಗೆ ಈ ರೈಫಲ್ ನೀಡಲು ಸರ್ಕಾರ ಮುಂದಾಗಿದೆ.

ಅಮೆರಿಕದ ಜೊತೆ ಸಹಿ:
ಕಳೆದ ವಾರ ರಕ್ಷಣಾ ಸಚಿವಾಲಯ ಅಮೆರಿಕದ ಸಿಗ್ ಸಾಯರ್ ಜೊತೆ 73 ಸಾವಿರ ಅಸಾಲ್ಟ್ ರೈಫಲ್ ಖರೀದಿ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಭಾರತ ಚೀನಾ ನಡುವಿನ 3,600 ಕಿ.ಮೀ ಗಡಿಯನ್ನು ಕಾಯುವ ಯೋಧರು ಈ ರೈಫಲ್ ಹಿಡಿದು ದೇಶವನ್ನು ಕಾಯಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *