ಕಲಬುರಗಿ: ನೀವು ಯಾವಾಗ ಸಿಎಂ ಆಗ್ತೀರಿ ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ, ಪ್ರತೀ ಬಾರಿಯೂ ನೀವು ಯಾವಾಗ ಸಿಎಂ ಆಗ್ತೀರಾ ಎಂದು ಕೇಳಿ ನನ್ನನ್ನು ಕಾಗದದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ ಎನ್ನುವ ನಗೆ ಚಾಟಕಿಯ ಉತ್ತರವನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ.
ಸಮ್ಮಿಶ್ರ ಸರಕಾರ ರಚನೆಯಾದ ಬಳಿಕ ಯುಪಿ ಮಾಜಿ ಸಿಎಂ ಮಾಯಾವತಿ ನಿಮ್ಮನ್ನು ಸಿ ಎಂ ಮಾಡಲು ಒಪ್ಪಿದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಖರ್ಗೆ ನೀವು ಅದನ್ನೇ ಕೇಳ್ತೀರಾ ನಾನು ಅದನ್ನೇ ಹೇಳ್ತೀನಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ಸಮ್ಮಿಶ್ರ ಸರಕಾರದಲ್ಲಿ ಯಾವುದೂ ಸರಿಯಿಲ್ಲ ಎಂಬುದು ಶುದ್ಧ ಸುಳ್ಳು ಸಂಗತಿ. ಡಾ. ಪರಮೇಶ್ವರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಾನೊಂದು ತೀರಾ ನಿನೊಂದು ತೀರಾ ಎನ್ನುವುದು ಊಹಾಪೋಹ ಮಾತಾಗಿದೆ. ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಿದೆ. ಕೆಲ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಹೈಕಮಾಂಡ್ ನಿವಾರಣೆ ಮಾಡುತ್ತದೆ. ಅಸಮಾಧಾನಗೊಂಡ ಶಾಸಕರುಗಳನ್ನು ಸಮಾಧಾನಗೊಳಿಸುತ್ತಾರೆ. ಈ ಮಧ್ಯೆ ಉರಿಯೊ ಬೆಂಕಿಗೆ ಯಾರೂ ತುಪ್ಪ ಸುರಿಯೋ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಿಯಿಸಿದರು.